ಉಳ್ಳಾಲ: ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕದಿಂದ ವಕ್ಫ್ ಇಲಾಖೆಯ ಚೆಕ್ ವಿತರಣೆ

Update: 2017-12-09 17:54 GMT

ಮಂಗಳೂರು, ಡಿ. 9: ಕರ್ನಾಟಕ ಸರಕಾರದ ವಕ್ಫ್ ಇಲಾಖೆಯ ಆರೋಗ್ಯ ನಿಧಿಯಿಂದ 93 ರೋಗಿಗಳಿಗೆ ಮಂಜೂರಾದ ಚೆಕ್‌ಗಳನ್ನು ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ನ ಉಳ್ಳಾಲದ ಆಶ್ರಯದಲ್ಲಿ ಶನಿವಾರ ನಗರದ ಕಲ್ಲಾಪುವಿನಲ್ಲಿರುವ ಯುನಿಟಿ ಹಾಲ್ ನಲ್ಲಿ ವಿತರಿಸಲಾಯಿತು.

93 ರೋಗಿಗಳಿಗೆ ಎರಡನೇ ಹಂತದಲ್ಲಿ 29,80,000 ರೂ. ಮೌಲ್ಯದ ಚೆಕ್ ಅನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಅವರು ಸಾಂಕೇತಿಕವಾಗಿ ಚೆಕ್ ಅನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರವು ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಮಾಹಿತಿಯ ಕೊರತೆಯಿಂದಾಗಿ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಜಮಾಅತೆ ಇಸ್ಲಾಮೀ ಹಿಂದ್‌ನ ಸಮಾಜ ಸೇವಾ ಘಟಕದ ಪ್ರಯತ್ನದ ಫಲವಾಗಿ ಅರ್ಹ 91 ರೋಗಿಗಳು ಫಲಾನುಭವಿಗಳಾಗಿರುವುದು ನಿಜಕ್ಕೂ ಉತ್ತಮ ಕೆಲಸ. ಇದು ಸಮಾಜದ ಇತರ ಸಂಘಸಂಸ್ಥೆಗಳಿಗೆ ಮಾದರಿ ಎಂದು ಶ್ಲಾಘಿಸಿದರು.

ಬಳಿಕ ಮಾತನಾಡಿದ ಉಳ್ಳಾಲ ನಗರಸಭೆಯ ಸದಸ್ಯ ಯು.ಎಚ್. ಫಾರೂಕ್, ಸಮಾಜ ಸೇವೆಗೆ ಪ್ರವಾದಿ ಮುಹಮ್ಮದ್(ಸ) ರವರು ಜಗತ್ತಿಗೆ ಮಾದರಿ ಯಾಗಿದ್ದಾರೆ. ಅವರ ಜೀವನ ಚರಿತ್ರೆಯನ್ನು ಸರಿಯಾಗಿ ತಿಳಿದುಕೊಂಡು ಜಾತಿ, ಧರ್ಮ, ಭೇದ ನೋಡದೆ ಮುಸ್ಲಿಂ ಸಮುದಾಯದವರು ಇನ್ನಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಇತರ ಧರ್ಮೀಯರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಈ ನಿಟ್ಟಿನಲ್ಲಿ ಸಮಾಜ ಸೇವಾ ಘಟಕವು ಕೈಗೊಂಡ ಸೇವೆಯು ಪ್ರಶಂಸನೀಯ ಎಂದರು.

ಕಾರ್ಯಕ್ರಮದಲ್ಲಿ ಹಿರಾ ಫೌಂಡೇಶನ್‌ನ ವತಿಯಿಂದ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.

ವೇದಿಕೆಯಲ್ಲಿ ಬೈತುಝ್ಝಕಾತ್‌ನ ಉಪಾಧ್ಯಕ್ಷ ಬಿ.ಎಚ್. ಹಮ್ಮಬ್ಬ, ಮಸ್ಜಿದುಲ್ ಹುದಾ ತೊಕ್ಕೊಟ್ಟು ಅಧ್ಯಕ್ಷ ಇಸ್ಮಾಯೀಲ್, ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯೀಲ್, ಸಮಾಜ ಸೇವಾ ಘಟಕ ಉಳ್ಳಾಲದ ಸಂಚಾಲಕ ಅಬ್ದುಸ್ಸಲಾಂ ಸಿ.ಎಚ್. ಉಪಸ್ಥಿತರಿದ್ದರು.

ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಅಧ್ಯಕ್ಷ ಅಬ್ದುಲ್ ಕರೀಂ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು. ಇಬ್ರಾಹೀಂ ಶಕೀಲ್ ಕಿರಾಅತ್ ಪಠಿಸಿದರು. ಇರ್ಷಾದ್ ವೇಣೂರ್ ಅನುವಾದ ವಾಚಿಸಿದರು. ಇಸ್ಹಾಕ್ ಕಲ್ಲಾಪು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಝಮ್ಮಿಲ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News