ಜ. 6, 7ರಂದು ಮೈಸೂರಿನಲ್ಲಿ ರಾಣಿ ಅಬ್ಬಕ್ಕ ಉತ್ಸವ

Update: 2017-12-09 18:00 GMT

ಮಂಗಳೂರು, ಡಿ. 9: ಮೈಸೂರಿನ ದಕ್ಷಿಣ ಕನ್ನಡ ಜಿಲ್ಲಾ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವೀರರಾಣಿ ಅಬ್ಬಕ್ಕ ಸಮಿತಿ ವತಿಯಿಂದ ಜ. 6ಮತ್ತು 7ರಂದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವೀರರಾಣಿ ಅಬ್ಬಕ್ಕ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜ.6ರಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವ ಉದ್ಘಾಟಿಸಲಿದ್ದಾರೆ. ಉತ್ಸವ ಸಂಘಟನೆಗೆ ಕರಾವಳಿ ಒಕ್ಕೂಟದ ಅಧ್ಯಕ್ಷ ಮತ್ತು ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟೀಯ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಅವರ ಸಂಚಾಲಕತ್ವದಲ್ಲಿ ಸಿದ್ಧತೆ ನಡೆಯುತ್ತಿದೆ ಎಂದರು.

ಕಳೆದ ವರ್ಷ ಬೆಂಗಳೂರಿನಲ್ಲಿ ಅಬ್ಬಕ್ಕ ಉತ್ಸವ ನಡೆಸಿದ್ದರೆ, ಈ ಬಾರಿ ಮೈಸೂರಿನಲ್ಲಿ ಆಯೋಜಿಸಲಾಗಿದೆ. ಮುಂದಿನ ವರ್ಷ ಹೊಸದಿಲ್ಲಿಯಲ್ಲಿ ನಡೆಸಲಾಗುವುದು. ಸರಕಾರ ಉತ್ಸವಕ್ಕೆ ಎಂಟು ಲಕ್ಷ ರೂ. ಅನುದಾನ ನೀಡಲಿದೆ ಎಂದು ಖಾದರ್ ಹೇಳಿದರು.

ಉತ್ಸವ ಸಮಿತಿ ಸಂಚಾಲಕ ಸುಧಾಕರ ಎಸ್.ಶೆಟ್ಟಿ ಮಾತನಾಡಿ, ಕರಾವಳಿ ಮೂಲದ ಸುಮಾರು 15 ಸಾವಿರ ಕುಟುಂಬ ಮೈಸೂರಿನಲ್ಲಿದೆ. 22 ಜಾತಿ ಸಂಘಟನೆಗಳ ಸುಮಾರು ಒಂದು ಲಕ್ಷ ಜನಸಂಖ್ಯೆ ಇದೆ. ಮೈಸೂರಿನಲ್ಲಿ ಎರಡು ದಿನಗಳಲ್ಲಿ ವಿವಿಧ ವಿಚಾರ ಸಂಕಿರಣ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐದು ಮಂದಿ ಸಾಧಕಿಯರಿಗೆ ಸನ್ಮಾನ, ರಾಣಿ ಅಬ್ಬಕ್ಕನ ಕುರಿತ ಎರಡು ನಾಟಕಗಳ ಪ್ರದರ್ಶ ನಡೆಯಲಿದೆ. ಉತ್ಸವಕ್ಕೆ ಸುಮಾರು ಒಂದು ಕೋಟಿ ರೂ. ವೆಚ್ಚವಾಗಲಿದೆ ಎಂದರು.

ರಾಣಿ ಅಬ್ಬಕ್ಕರ ಪರಿಚಯ ರಾಜ್ಯಕ್ಕೆ ಆಗಬೇಕು. ಅವರ ಸಾಹಸಗಾಥೆ ಎಲ್ಲರಿಗೂ ತಿಳಿಯಬೇಕು ಎಂಬ ಉದ್ದೇಶ ನಮ್ಮದು. ಅಬ್ಬಕ್ಕನ ಸಾಹಸಗೀತೆ, ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ವಸ್ತುಪ್ರದರ್ಶನ, ಏಕಕಾಲಕ್ಕೆ ಸುಮಾರು 15 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ  ಎಫ್ ಕೆಸಿಸಿಐ ನಿರ್ದೇಶಕ ರವೀಂದ್ರ ಸ್ವಾಮಿ, ಮೈಸೂರಿನ ದಕ್ಷಿಣ ಕನ್ನಡ ಜಿಲ್ಲಾ ಸಂಘದ ಕಾರ್ಯದರ್ಶಿ ಜನಾರ್ದನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News