ನೋಟು ನಿಷೇಧ,ಜಿಎಸ್‌ಟಿ ಆಘಾತ ಇನ್ನೂ ಎರಡು ವರ್ಷ ಇರಲಿದೆ

Update: 2017-12-10 13:43 GMT

ಮುಂಬೈ,ಡಿ.10: ಜಿಎಸ್‌ಟಿ, ನೋಟು ನಿಷೇಧ ಮತ್ತು ಹೆಚ್ಚುತ್ತಿರುವ ಕೆಟ್ಟ ಸಾಲಗಳ ಮೊತ್ತದಂತಹ ಆಘಾತಗಳ ಹಿನ್ನೆಲೆಯಲ್ಲಿ ಸದ್ಯೋಭವಿಷ್ಯದಲ್ಲಿ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಊಹಿಸಲು ನಿರಾಕರಿಸಿರುವ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ವೈ.ವಿ.ರೆಡ್ಡಿ ಅವರು, ಆರ್ಥಿಕತೆಯು ಬಲಗೊಳ್ಳಲು ಮತ್ತು ಹೆಚ್ಚು ಬೆಳವಣಿಗೆ ಮಟ್ಟಕ್ಕೆ ಮರಳಲು ಇನ್ನೂ ಎರಡು ವರ್ಷಗಳ ಕಾಲಾವಕಾಶ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

  ವಾರಾಂತ್ಯದಲ್ಲಿ ಆಯ್ದ ಸುದ್ದಿಗಾರರ ಗುಂಪಿನೊಂದಿಗೆ ಮಾತನಾಡುತ್ತಿದ್ದ ಅವರು, ಆರ್ಥಿಕ ಬೆಳವಣಿಗೆಯನ್ನು ಅಂದಾಜಿಸುವುದು ಅಥವಾ ಆರ್ಥಿಕತೆಯ ಬೆಳವಣಿಗೆಯು ಶೇ.7.5-8ರ ದರಕ್ಕೆ ಯಾವಾಗ ಮರಳುತ್ತದೆ ಎಂದು ಹೇಳುವುದು ಸದ್ಯಕ್ಕೆ ಕಠಿಣವಾಗಿದೆ. ಮುಂದಿನ 24 ತಿಂಗಳುಗಳಲ್ಲಿ ಆರ್ಥಿಕತೆಯು ತನ್ನ ಹಿಂದಿನ ಮಟ್ಟಕ್ಕೆ ಮರಳುವ ಸಾಧ್ಯತೆಗಳು ಕಂಡು ಬರುತ್ತಿಲ್ಲ ಎಂದು ಹೇಳಿದರು.

 ಸರಕಾರದ ಕ್ರಮಗಳಲ್ಲಿ ನಕಾರಾತ್ಮಕ ಅಂಶಗಳೇ ಮುಂಚೂಣಿಯಲ್ಲಿರುವುದು ಆಘಾತವನ್ನುಂಟು ಮಾಡಿದೆ. ಕೆಲ ಪರಿಷ್ಕರಣೆಗಳಾಗಬಹುದು ಮತ್ತು ಕೆಲವು ಪ್ರಮಾಣದಲ್ಲಿ ಲಾಭಗಳೂ ಇರಬಹುದು. ಆದರೆ ಲಾಭಗಳು ನಂತರ ದೊರೆಯಲಿವೆ, ಈಗಂತೂ ನೋವು ಇದ್ದೇ ಇದೆ. ಎಷ್ಟರ ಮಟ್ಟಿಗೆ ಮತ್ತು ಯಾವಾಗ ಲಾಭವಾಗಬಹುದು ಎನ್ನುವುದು ಪ್ರಮುಖವಾಗಿದೆ ಎಂದ ಅವರು, ಆಘಾತಕಾರಿ ಅಂಶಗಳು ಕಡಿಮೆಯಾ ಗುತ್ತಿವೆ, ಆದರೆ ಧನಾತ್ಮಕ ಮಗ್ಗಲನ್ನು ಇನ್ನಷ್ಟೇ ಕಾಣಬೇಕಿದೆ ಮತ್ತು ಆ ಕಾಲ ಬರುತ್ತದೆ ಎಂದು ತಾನು ಆಶಿಸಿದ್ದೇನೆ ಎಂದರು.

ಜಾಗತಿಕ ಕಚ್ಚಾ ತೈಲಬೆಲೆಗಳಲ್ಲಿ ಭಾರೀ ಕುಸಿತವು ಸುಮಾರು ಮೂರು ವರ್ಷಗಳ ಕಾಲ ಆರ್ಥಿಕತೆಯು ಬಲಗೊಳ್ಳಲು ನೆರವಾಗಿತ್ತು. ಆದರೆ ಇತ್ತೀಚಿನ ನಕಾರಾತ್ಮಕ ಅಂಶಗಳು ಆರ್ಥಿಕತೆಯ ಬೆಳವಣಿಗೆ ದರಕ್ಕೆ ಪೆಟ್ಟು ನೀಡಿವೆ ಎಂದ ಅವರು, ಹಿಂದಿನ ಸರಕಾರದ ಆಡಳಿತದಲ್ಲಿ ಬೇಕಾಬಿಟ್ಟಿ ಸಾಲ ನೀಡಿಕೆ ಮತ್ತು ಭ್ರಷ್ಟಾಚಾರದ ಆರೋಪಗಳಿಂದಾಗಿ ದೂರಸಂಪರ್ಕ, ವಿದ್ಯುತ್ ಹಾಗೂ ಕಲ್ಲಿದ್ದಲು ಕ್ಷೇತ್ರಗಳಲ್ಲಿಯ ಕೆಲವು ಬೆಳವಣಿಗೆಗಳು ಕಾರ್ಪೊರೇಟ್ ಜಗತ್ತಿನ ಮೇಲೆ ಭಾರೀ ಒತ್ತಡವನ್ನುಂಟು ಮಾಡಿದ್ದವು. ಪರಿಣಾಮವಾಗಿ ವ್ಯವಸ್ಥೆಯಲ್ಲಿನ ಕೆಟ್ಟ ಸಾಲಗಳ ಮೊತ್ತ ಶೇ.15ರಷ್ಟು ಏರಿಕೆಯಾಗಿ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಸುಮಾರು 10 ಲ.ಕೋ.ರೂ.ಗೆ ತಲುಪಿದೆ ಎಂದರು.

   ಆರ್ಥಿಕತೆಯ ಕುಸಿತಕ್ಕೆ ಅಂತಾರರಾಷ್ಟ್ರೀಯ ಮತ್ತು ತಾನು ಹೇಳಿದ ನಕಾರಾತ್ಮಕ ಆಘಾತಗಳಂತಹ ಆಂತರಿಕ ಅಂಶಗಳು ಕಾರಣವಾಗಿವೆ ಎಂದ ಅವರು, ಈ ನಕಾರಾತ್ಮಕ ಆಘಾತಗಳನ್ನು ಹೇಗೆ ನೋಡಬೇಕು ಎನ್ನುವುದರಲ್ಲಿ ಅಭಿಪ್ರಾಯ ಭೇದಗಳಿವೆ. ವಿದೇಶಿಯರು ಇವನ್ನು ಸಾಂಸ್ಥಿಕ ಬದಲಾವಣೆಗಳು ಎಂದು ಪರಿಗಣಿಸಿದ್ದಾರೆ. ಕೆಲವು ವಿಶ್ಲೇಷಕರು ಆರ್ಥಿಕ ಬೆಳವಣಿಗೆಯ ಮೇಲೆ ಶಾಶ್ವತ ಪರಿಣಾಮವನ್ನುಂಟು ಮಾಡಿವೆ ಎಂದು ಹೇಳಿದರೆ,ಇನ್ನು ಕೆಲವರು ಇದು ತಾತ್ಕಾಲಿಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News