ರೈಲ್ವೇ ನೇಮಕಾತಿ ಸಂದರ್ಭ ನಿಯಮ ಪಾಲನೆಗೆ ಸೂಚನೆ

Update: 2017-12-10 14:21 GMT

ಹೊಸದಿಲ್ಲಿ, ಡಿ.10: ಭಾರತೀಯ ರೈಲ್ವೇಯ ಸುಮಾರು ಶೇ.25ರಷ್ಟು ಉದ್ಯೋಗಿಗಳನ್ನು ನೇಮಕಾತಿ ನಿಯಮದ ಪ್ರಕಾರ ಆಯ್ಕೆ ಮಾಡಿಕೊಂಡಿಲ್ಲ ಎಂಬ ವರದಿಯ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ನೇಮಕಾತಿ ಸಂದರ್ಭ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರೈಲ್ವೇ ವಲಯಗಳಿಗೆ ಸೂಚನೆ ನೀಡಲಾಗಿದೆ.

ರೈಲ್ವೇ ಇಲಾಖೆ ನಿಗದಿಪಡಿಸಿದ ಅರ್ಹತೆಯ ಮಾನದಂಡವನ್ನು ಪಾಲಿಸದೆ, ರೈಲ್ವೇಯ ಮೂಲ ಕಾರ್ಯನಿರ್ವಹಣಾ ತಂಡವಾಗಿರುವ ರೈಲು ಚಾಲಕರು, ಸಹಾಯಕ ಚಾಲಕರು, ಗಾರ್ಡ್‌ಗಳನ್ನು ನೇಮಕ ಮಾಡಿಕೊಂಡಿರುವುದು ಕಂಡು ಬಂದಿದೆ. ಆದ್ದರಿಂದ ರೈಲ್ವೇ ವಲಯಗಳು ಸಿಬ್ಬಂದಿಗಳನ್ನು ರೈಲ್ವೇ ಇಲಾಖೆಯ ಸಿಬ್ಬಂದಿ ನಿರ್ವಹಣಾ ವ್ಯವಸ್ಥೆ(ಸಿಎಂಎಸ್)ಯಿಂದಲೇ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಅವರ ಸ್ಥಾನಮಾನದ ಬಗ್ಗೆ ಮಾಹಿತಿ ನೀಡಬೇಕು ಎಂದು ಇಲಾಖೆ ಸೂಚನೆ ನೀಡಿದೆ.

    ಸಿಎಂಎಸ್ ವ್ಯವಸ್ಥೆ ಸಿಬ್ಬಂದಿಗಳನ್ನು ಆಯ್ಕೆ ಮಾಡಿಕೊಳ್ಳಲು ‘ನಿಯಮದ ಅನ್ವಯ’ ಹಾಗೂ ‘ಎಲ್ಲರೂ’ ಎಂಬ ಎರಡು ಆಯ್ಕೆಗಳನ್ನು ನೀಡುತ್ತದೆ. ನಿಯಮದ ಅನ್ವಯ ವಿಭಾಗದಲ್ಲಿ ಕೆಲವೊಂದು ಅರ್ಹತಾ ಮಾನದಂಡ ವಿಧಿಸಲಾಗಿದೆ. ಆದರೆ ‘ಎಲ್ಲರೂ’ ವಿಭಾಗದಲ್ಲಿ - ಉತ್ತಮ ಆರೋಗ್ಯ ಹೊಂದಿರಬೇಕು ಹಾಗೂ ‘ಸಾರಿಗೆ ಪುನಶ್ಚೇತನ’ ಅಧ್ಯಯನವನ್ನು ಪೂರೈಸಿರಬೇಕು ಎಂಬ ಕೇವಲ ಎರಡು ಮಾನದಂಡ ವಿಧಿಸಲಾಗುತ್ತದೆ.

  ದಕ್ಷಿಣ ಪೂರ್ವ ರೈಲ್ವೇ ವಲಯವು ‘ನಿಯಮದ ಅನ್ವಯ’ ಆಯ್ಕೆಯಡಿ ಕೇವಲ ಶೇ.56ರಷ್ಟು ಸಿಬ್ಬಂದಿಗಳನ್ನು ಆಯ್ಕೆ ಮಾಡಿದ್ದರೆ, ಕೇಂದ್ರ ವಲಯ ಶೇ.66 , ‘ಈಸ್ಟ್ ಕೋಸ್ಟ್ ರೈಲ್ವೇ’ ವಲಯ ಶೇ.61ರಷ್ಟು ಸಿಬ್ಬಂದಿಗಳನ್ನು ಆಯ್ಕೆ ಮಾಡಿದೆ. ಇದು ತೃಪ್ತಿದಾಯಕವಲ್ಲ ಎಂದು ರೈಲ್ವೇ ಮಂಡಳಿ ವಿಶ್ಲೇಷಿಸಿದೆ.

   2016ರ ಜನವರಿ 1ರಿಂದ 2016ರ ಜೂನ್ 30ರವರೆಗಿನ ಅವಧಿಯಲ್ಲಿ ದಕ್ಷಿಣ ಪೂರ್ವ ರೈಲ್ವೇ ವಲಯವು ಕೇವಲ ಶೇ.4.49ರಷ್ಟು ಸಿಬ್ಬಂದಿಗಳನ್ನು ನಿಯಮದ ಪ್ರಕಾರ ನೇಮಕ ಮಾಡಿಕೊಂಡಿದೆ. ಪೂರ್ವ ರೈಲ್ವೇ ವಲಯವು ಕೇವಲ ಶೇ.5.25ರಷ್ಟು, ದಕ್ಷಿಣ ರೈಲ್ವೇ ವಲಯವು ಕೇವಲ ಶೇ.7.45ರಷ್ಟು ಸಿಬ್ಬಂದಿಗಳನ್ನು ನಿಯಮದ ಪ್ರಕಾರ ಆಯ್ಕೆ ಮಾಡಿಕೊಳ್ಳುತ್ತಿದೆ. ಸಿಎಂಎಸ್ ನಿಯಮದ ಪ್ರಕಾರವೇ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ರೈಲ್ವೇ ವಲಯಗಳು ಗರಿಷ್ಟ ಪ್ರಯತ್ನ ಮಾಡಬೇಕು ಎಂದು ರೈಲ್ವೇ ಮಂಡಳಿಯ ಪತ್ರದಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News