ಅಹ್ಮದ್ ಪಟೇಲ್ ಗುಜರಾತ್ ಸಿಎಂ ಆಗಬೇಕೆಂದು ಪಾಕ್ ಸೇನೆಯ ಮಾಜಿ ಡಿಜಿ ಬಯಸುವುದೇಕೆ?: ಪ್ರಧಾನಿ ಮೋದಿ ಪ್ರಶ್ನೆ

Update: 2017-12-10 14:46 GMT

 ಪಾಲನಪುರ(ಗುಜರಾತ್),ಡಿ.10: ಪಾಕಿಸ್ತಾನವು ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ರವಿವಾರ ಇಲ್ಲಿ ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇತ್ತೀಚಿಗೆ ಪಾಕ್ ನಾಯಕರನ್ನು ಭೇಟಿಯಾಗಿದ್ದರೆನ್ನಲಾದ ಪಕ್ಷದ ಹಿರಿಯ ನಾಯಕರ ಬಗ್ಗೆ ವಿವರಣೆಯನ್ನು ನೀಡುವಂತೆ ಕಾಂಗ್ರೆಸ್‌ನ್ನು ಆಗ್ರಹಿಸಿದರು.

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರನ್ನು ಗುಜರಾತ್‌ನ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಪಾಕಿಸ್ತಾನ ಸೇನೆಯ ಮಾಜಿ ಮಹಾ ನಿರ್ದೇಶಕ(ಡಿಜಿ) ಸರ್ದಾರ್ ಅರ್ಷದ್ ರಫೀಕ್ ಅವರು ಮಾಡಿಕೊಂಡಿದ್ದಾರೆನ್ನಲಾದ ಮನವಿಯ ಬಗ್ಗೆಯೂ ಪ್ರಶ್ನೆಗಳನ್ನೆತ್ತಿದರು.

 ಮಣಿಶಂಕರ್ ಅಯ್ಯರ್ ಅವರ ನಿವಾಸದಲ್ಲಿ ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪಾಕ್ ರಾಯಭಾರಿ, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ, ಭಾರತದ ಮಾಜಿ ಉಪರಾಷ್ಟ್ರಪತಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾಗಿಯಾಗಿದ್ದರೆಂದು ಶುಕ್ರವಾರ ಮಾಧ್ಯಮಗಳು ವರದಿ ಮಾಡಿವೆ ಎಂದ ಮೋದಿ, ಈ ಸಭೆಯ ಮರುದಿನವೇ ‘ಮೋದಿ ನೀಚ’ ಎಂದು ಅಯ್ಯರ್ ಹೇಳಿದ್ದರು. ಇದು ಗಂಭೀರವಾದ ವಿಷಯವಾಗಿದೆ ಎಂದರು.

ಒಂದೆಡೆ, ಗುಜರಾತ್ ಮುಖ್ಯಮಂತ್ರಿಯಾಗಿ ಪಟೇಲ್ ನೇಮಕವನ್ನು ರಶೀದ್ ಬೆಂಬಲಿಸಿದ್ದಾರೆ. ಇನ್ನೊಂದೆಡೆ ಪಾಕಿಸ್ತಾನಿಗಳು ಅಯ್ಯರ್ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಆ ಸಭೆಯ ಬಳಿಕ ಗುಜರಾತಿನ ಜನರು, ಹಿಂದುಳಿದ ಸಮುದಾಯಗಳು, ಬಡವರು ಮತ್ತು ಮೋದಿಯನ್ನು ಅವಮಾನಿಸಲಾಗಿದೆ ಎಂದ ಅವರು, ಇಂತಹ ಘಟನೆಗಳು ಶಂಕೆಗಳನ್ನು ಮೂಡಿಸುತ್ತವೆ ಎಂದು ನಿಮಗೆ ಅನಿಸುತ್ತಿದೆಯೇ ಎಂದು ಸಭೆಯನ್ನು ಪ್ರಶ್ನಿಸಿದರು.

ನಿಖರವಾಗಿ ತಾನೇನು ಬಯಸಿದ್ದೇನೆ ಎನ್ನುವುದನ್ನು ಕಾಂಗ್ರೆಸ್ ಈ ದೇಶದ ಜನರಿಗೆ ತಿಳಿಸಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News