ಮೋದಿ ಭಾಷಣಗಳಲ್ಲಿ ನೋಟು ಬ್ಯಾನ್ ಜಿಎಸ್‌ಟಿ ಬಗ್ಗೆ ಪ್ರಸ್ತಾಪವಿಲ್ಲ: ರಾಹುಲ್ ಗಾಂಧಿ

Update: 2017-12-10 15:09 GMT

ಅಹ್ಮದಾಬಾದ್, ಡಿ.10: ರವಿವಾರದಂದು ಗುಜರಾತ್ ಚುನಾವಣೆಯ ಎರಡನೇ ಹಂತದ ಅಭಿಯಾನದ ಪ್ರಯುಕ್ತ ಇಲ್ಲಿನ ರಾಂಚೊಡ್ ರೈಜಿ ಕೃಷ್ಣ ಮಂದಿರಕ್ಕೆ ತೆರಳಿ ಪಡೆದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಸದ್ಯದ ಚುನಾವಣಾ ಭಾಷಣಗಳಲ್ಲಿ ತಮ್ಮ ಬಗ್ಗೆಯೇ 90% ಮಾತನಾಡುತ್ತಿದ್ದಾರೆ. ನೋಟು ರದ್ದತಿ, ಜಿಎಸ್‌ಟಿ ಹಾಗೂ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಯಾವುದೇ ಹೇಳಿಕೆಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು. ಪ್ರಧಾನಿ ಮೋದಿಗೆ ಅಭಿವೃದ್ಧಿ ಬಗ್ಗೆ ಮಾತನಾಡಲು ಏನೂ ಉಳಿದಿಲ್ಲ ಹಾಗಾಗಿ ಅವರು ತಮ್ಮ ಬಗ್ಗೆಯೇ ಮಾತನಾಡುತ್ತಾರೆ ಎಂದು ರಾಹುಲ್ ವ್ಯಂಗ್ಯವಾಡಿದರು.

ಮೊದಲಿಗೆ ಈ ಚುನಾವಣಾ ಅಭಿಯಾನವನ್ನು ನರ್ಮದಾ ಸಮಸ್ಯೆಯಿಂದ ಬಿಜೆಪಿ ಆರಂಭಿಸಿತ್ತು. ಆದರೆ 4-5 ದಿನಗಳ ನಂತರ ಸಾರ್ವಜನಿಕರು ನಮಗೆ ನದಿಯ ನೀರು ದೊರಕುತ್ತಿಲ್ಲ ಎಂದು ದೂರಿದ್ದರು. ಕೂಡಲೇ ತನ್ನ ನಿಲುವನ್ನು ಬದಲಿಸಿದ ಬಿಜೆಪಿ ಈ ಬಾರಿ ಚುನಾವಣೆಯನ್ನು ನರ್ಮದಾ ಸಮಸ್ಯೆಯ ಆಧಾರದಲ್ಲಿ ಅಲ್ಲ ಬದಲಿಗೆ ಹಿಂದುಳಿದ ವರ್ಗಗಳ ಸಮಸ್ಯೆಗಳ ಆಧಾರದಲ್ಲಿ ನಡೆಸಲಾಗುವುದು ಎಂಬ ನಿರ್ಧಾರಕ್ಕೆ ಬಂತು ಎಂದು ಗಾಂಧಿ ತಿಳಿಸಿದರು. ಆಗ ಬಿಜೆಪಿ ನಮಗೆ ಏನೂ ಮಾಡಿಲ್ಲ ಎಂದು ಹಿಂದುಳಿದ ವರ್ಗಗಳ ಜನರು ಆರೋಪಿಸಿದರು. ಆಗ ಮತ್ತೆ ತನ್ನ ನಿಲುವು ಬದಲಿಸಿದ ಬಿಜೆಪಿ ಅಭಿವೃದ್ಧಿ ಯಾತ್ರೆಯನ್ನು ನಡೆಸಿ ಕಳೆದ 22 ವರ್ಷಗಳ ಅಭಿವೃದ್ಧಿಯ ಬಗ್ಗೆ ಮಾತನಾಡುವ ನಿರ್ಧಾರವನ್ನು ಮಾಡಿತು ಎಂದು ಕಾಂಗ್ರೆಸ್ ಉಪಾಧ್ಯಕ್ಷ ತಿಳಿಸಿದರು.

ಶನಿವಾರ ನಾನು ಮೋದಿಯವರ ಭಾಷಣ ಕೇಳುತ್ತಿದ್ದೆ, ಅದರಲ್ಲಿ ಅವರು ಶೇಕಡಾ 90% ತಮ್ಮ ಬಗ್ಗೆಯೇ ಮಾತನಾಡುತ್ತಿದ್ದರು ಎಂದು ವ್ಯಂಗ್ಯವಾಡಿದ ರಾಹುಲ್, ಚುನಾವಣೆಯು ಮೋದಿಗಾಗಲೀ ಅಥವಾ ನನಗಾಗಲೀ ಅಲ್ಲ. ಅದು ಬಿಜೆಪಿ ಅಥವಾ ಕಾಂಗ್ರೆಸ್ ಬಗ್ಗೆಯೂ ಅಲ್ಲ. ಈ ಚುನಾವಣೆಯು ಗುಜರಾತ್‌ನ ಜನರ ಭವಿಷ್ಯಕ್ಕಾಗಿಯಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ರಾಜ್ಯದ ಭವಿಷ್ಯದ ಬಗ್ಗೆ ತಮ್ಮ ಯೋಜನೆಗಳ ಕುರಿತು ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಯಾವುದೇ ಹೇಳಿಕೆಗಳನ್ನು ನೀಡುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಪಟೇಲರು, ದಲಿತರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರರು ನಡೆಸುತ್ತಿರುವ ಪ್ರತಿಭಟನೆಗಳ ಬಗ್ಗೆಯೂ ಮೋದಿ ಮೌನವಹಿಸಿರುವುದನ್ನು ಕಾಂಗ್ರೆಸ್‌ನ ಭವಿಷ್ಯದ ಅಧ್ಯಕ್ಷ ಪ್ರಶ್ನಿಸಿದರು. ಪ್ರಧಾನಿ ಮೋದಿ ವಿರುದ್ಧ ಯಾವುದೇ ಕೆಟ್ಟ ಶಬ್ದಗಳನ್ನು ಬಳಸದಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ ರಾಹುಲ್ ಗಾಂಧಿ, ನಾವು ಪ್ರೀತಿ ಮತ್ತು ಸಿಹಿಯಾದ ಶಬ್ದಗಳಿಂದಲೇ ಬಿಜೆಪಿಯನ್ನು ಸೋಲಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿ ವಿಚಾರದಲ್ಲಿ ಮೋದಿ ಮೇಲೆ ಟೀಕೆಗಳ ಮಳೆಸುರಿದ ರಾಹುಲ್ ಗಾಂಧಿ ನೋಟು ಅಮಾನ್ಯದಿಂದ ಕಳ್ಳರು ತಮ್ಮ ಕಪ್ಪುಹಣವನ್ನು ಬಿಳಿ ಮಾಡಲು ಸಾಧ್ಯವಾದರೆ ಗಬ್ಬರ್ ಸಿಂಗ್ ತೆರಿಗೆಯು ಸಣ್ಣ ವ್ಯಾಪಾರಸ್ಥರನ್ನು ಸರ್ವನಾಶ ಮಾಡಿದೆ. ಒಂದು ಲಕ್ಷ ಜನರ ಉದ್ಯೋಗ ಕಿತ್ತುಕೊಂಡಿದೆ ಎಂದು ಆರೋಪಿಸಿದರು.

ಬಿಜೆಪಿ ಅಧ್ಯಕ್ಷ ಅಮಿತ್ ಶಾರ ಮಗ ಜಯ್ ಶಾ ತನ್ನ ವ್ಯವಹಾರದಲ್ಲಿ ರೂ. 50,000ವನ್ನು ರೂ. 80 ಕೋಟಿಯಾಗಿ ಪರಿವರ್ತಿಸಿರುವ ಮತ್ತು ರಫೆಲ್ ಯುದ್ಧವಿಮಾನ ಖರೀದಿ ಒಪ್ಪಂದ ಬಗ್ಗೆಯು ರಾಹುಲ್ ಪ್ರಶ್ನೆಗಳನ್ನು ಎಸೆದರು. ಮೋದಿ ಆರಂಭದಲ್ಲಿ “ನಾನೂ ತಿನ್ನುವುದಿಲ್ಲ ಇತರರನ್ನೂ ತಿನ್ನಲು ಬಿಡುವುದಿಲ್ಲ” ಎಂದು ಹೇಳುತ್ತಿದ್ದರು. ಆದರೆ ಈಗ ಒಂದು ಶಬ್ದವನ್ನೂ ಹೇಳುತ್ತಿಲ್ಲ. ಈಗ ಅವರು ತಮ್ಮ ಭಾಷಣಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಗಬ್ಬರ್ ಸಿಂಗ್ ತೆರಿಗೆ ಹಾಕುವ ಮೂಲಕ ನಿಮ್ಮನ್ನೆಲ್ಲಾ ಸರತಿ ಸಾಲಿನಲ್ಲಿ ನಿಂತು ಕಾಯುವಂತೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News