×
Ad

ಗುಜರಾತ್ ಚುನಾವಣೆ: ದರ ಪರಿಷ್ಕರಣೆಯನ್ನು ತಪ್ಪಿಸಿದ ತೈಲ ಸಂಸ್ಥೆಗಳು

Update: 2017-12-10 21:52 IST

ಹೊಸದಿಲ್ಲಿ, ಡಿ.10: ಕಳೆದ 17 ತಿಂಗಳಲ್ಲಿ 19 ಕಂತುಗಳಲ್ಲಿ ಅಡುಗೆ ಅನಿಲ ದರವನ್ನು 76.5 ರೂ. ಏರಿಕೆ ಮಾಡಿದ್ದ ತೈಲ ಸಂಸ್ಥೆಗಳು ಈ ತಿಂಗಳು ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ಸರ ಪರಿಷ್ಕರಣೆಯಿಂದ ತಪ್ಪಿಸಿಕೊಂಡಿವೆ.

 ಅಡುಗೆ ಅನಿಲಕ್ಕೆ ಸರಕಾರ ನೀಡುವ ಸಬ್ಸಿಡಿಯನ್ನು 2018ರ ಹೊತ್ತಿಗೆ ಸಂಪೂರ್ಣವಾಗಿ ತೆಗೆದುಹಾಕುವ ಉದ್ದೇಶದಿಂದ ರಾಜ್ಯ ಒಡೆತನದ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಕಳೆದ ವರ್ಷ ಜುಲೈಯಿಂದ ಎಲ್‌ಪಿಜಿ ದರವನ್ನು ಪ್ರತಿ ತಿಂಗಳ ಒಂದನೆ ತಾರೀಕಿನಿಂದ ಏರಿಕೆ ಮಾಡುತ್ತಲೇ ಬಂದಿದೆ. ಆದರೆ ಈ ತಿಂಗಳು ಈ ಪ್ರಕ್ರಿಯೆಯನ್ನು ನಡೆಸದೆ ತಪ್ಪಿಸಿಕೊಂಡಿದೆ.

ಹೌದು, ಇದು ನಿಜ. ನಾವು ಈ ತಿಂಗಳು ಎಲ್‌ಪಿಜಿ ದರವನ್ನು ಪರಿಷ್ಕರಿಸಿಲ್ಲ ಎಂದು ತಿಳಿಸಿದ ತೈಲ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು, ಈ ನಿರ್ಧಾರವನ್ನು ಯಾಕೆ ತೆಗೆದುಕೊಳ್ಳಲಾಯಿತು ಎಂದ ಬಗ್ಗೆ ಹೇಳಲು ನನ್ನಿಂದ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್‌ನ ಬೆಲೆಯನ್ನು ನವೆಂಬರ್‌ನಲ್ಲಿ ರೂ. 4.50 ಏರಿಸಲಾಗಿತ್ತು. ಆಮೂಲಕ ಪ್ರತಿ ಸಿಲಿಂಡರ್ ಬೆಲೆ ರೂ. 495.69ಕ್ಕೆ ಏರಿತ್ತು.

ಮಾರ್ಚ್ 2018 ಒಳಗಾಗಿ ಅಡುಗೆ ಅಲಿನ ಸಿಲಿಂಡರ್ ಮೇಲೆ ನೀಡಲಾಗುವ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಸಲುವಾಗಿ ಪ್ರತಿ ತಿಂಗಳು ಬೆಲೆಯನ್ನು ಏರಿಸುವಂತೆ ಸರಕಾರವು ತೈಲ ಸಂಸ್ಥೆಗಳಿಗೆ ಸೂಚಿಸಿತ್ತು. ಅದರಂತೆ ಕಳೆದ ಜುಲೈಯಿಂದ ಪ್ರತಿ ತಿಂಗಳು ಏರಿಕೆ ಕಂಡು ಈವರೆಗೆ ರೂ. 76.51 ಪ್ರತಿ ಸಿಲಿಂಡರ್ ಏರಿಕೆ ಕಂಡಿದೆ. ಪ್ರತಿ ಕುಟುಂಬಕ್ಕೆ ವಾರ್ಷಿಕ 14.2 ಕೆ.ಜಿಯ 12 ಎಲ್‌ಪಿಜಿ ಸಿಲಿಂಡರ್‌ಗಳನ್ನು ಒದಗಿಸಲಾಗಿದ್ದು ಇದಕ್ಕಿಂತ ಹೆಚ್ಚಿನ ಸಿಲಿಂಡರ್ ಅಗತ್ಯವಿದ್ದಲ್ಲಿ ಮಾರುಕಟ್ಟೆ ಬೆಲೆಯಲ್ಲಿ ಖರೀದಿಸಬೇಕಾಗುತ್ತದೆ.

ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನಾ ಮತ್ತು ವಿಶ್ಲೇಷಣಾ ವಿಭಾಗದ ಪ್ರಕಾರ 14.2 ಕೆ.ಜಿ ಭಾರದ ಎಲ್‌ಪಿಜಿ ಸಿಲಿಂಡರ್ ಮೇಲೆ ರೂ. 251.31 ಸಬ್ಸಿಡಿಯನ್ನು ನೀಡಲಾಗುತ್ತಿದೆ.

ದೇಶದಲ್ಲಿ ಒಟ್ಟಾರೆ 18.11 ಕೋಟಿ ಸಬ್ಸಿಡಿ ಹೊಂದಿದ ಎಲ್‌ಪಿಜಿ ಬಳಸುವ ಗ್ರಾಹಕರಿದ್ದಾರೆ. ಈ ಪೈಕಿ ಈ ವರ್ಷ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸಲಾದ ಮೂರು ಕೋಟಿ ಮಹಿಳೆಯರೂ ಸೇರಿದ್ದಾರೆ. ಪ್ರಧಾನಿ ಮೋದಿಯ ಮನವಿಯ ಮೇರೆಗೆ ಸಬ್ಸಿಡಿಯನ್ನು ತೊರೆದಿರುವ 2.66 ಕೋಟಿ ಗ್ರಾಹಕರು ಸಬ್ಸಿಡಿರಹಿತ ಎಲ್‌ಪಿಜಿಯನ್ನು ಬಳಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News