ಜೆರುಸಲೇಂ ನಿರ್ಧಾರ ಹಿಂದಕ್ಕೆ ಪಡೆಯಿರಿ: ಟ್ರಂಪ್ ಆಡಳಿತಕ್ಕೆ ಅರಬ್ ವಿದೇಶ ಸಚಿವರ ಒತ್ತಾಯ

Update: 2017-12-10 16:48 GMT

ಕೈರೋ (ಈಜಿಪ್ಟ್), ಡಿ. 10: ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡುವ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಅರಬ್ ವಿದೇಶ ಸಚಿವರು ರವಿವಾರ ಅಮೆರಿಕವನ್ನು ಒತ್ತಾಯಿಸಿದ್ದಾರೆ.

ಇದೊಂದು ‘ಅಪಾಯಕಾರಿ’ ಬೆಳವಣಿಗೆಯಾಗಿದ್ದು, ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಹಾಗೂ ಅಮೆರಿಕವನ್ನು ‘ಆಕ್ರಮಣಶೀಲರ’ ಪಟ್ಟಿಯಲ್ಲಿ ಸೇರಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.

  ಅದೇ ವೇಳೆ, ಟ್ರಂಪ್ ನಿರ್ಧಾರವನ್ನು ಖಂಡಿಸಿ ನಿರ್ಣಯವೊಂದನ್ನು ಅಂಗೀಕರಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕರೆ ನೀಡುವ ನಿರ್ಣಯವೊಂದನ್ನೂ ಅರಬ್ ಸಚಿವರೂ ಅಂಗೀಕರಿಸಿದ್ದಾರೆ. ಆದರೆ, ಅದಕ್ಕೆ ಅಮೆರಿಕ ವೀಟೊ ಚಲಾಯಿಸಬಹುದು ಎಂಬುದನ್ನೂ ಅವರು ಒಪ್ಪಿಕೊಂಡ್ದಿದ್ದಾರೆ.

 ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಧಾರಕ್ಕೆ ಅಮೆರಿಕ ವೀಟೊ ಚಲಾಯಿಸಿದರೆ, ಇಂಥದೇ ನಿರ್ಣಯವನ್ನು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲೂ ಅರಬ್ ದೇಶಗಳು ಮಂಡಿಸಲಿವೆ ಎಂದು ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಮುಂಜಾನೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಫೆಲೆಸ್ತೀನ್ ವಿದೇಶ ಸಚಿವ ರಿಯಾದ್ ಅಲ್-ಮಾಲಿಕಿ ತಿಳಿಸಿದರು.

ಶನಿವಾರ ರಾತ್ರಿ ಆರಂಭಗೊಂಡ ಅರಬ್ ದೇಶಗಳ ತುರ್ತು ಸಭೆ ರವಿವಾರ ಮುಂಜಾವಿನವರೆಗೂ ನಡೆಯಿತು.

ಆದಾಗ್ಯೂ, ಸಭೆಯಲ್ಲಿ ಅಂಗೀಕರಿಸಿದ ಎರಡು ಪುಟಗಳ ನಿರ್ಣಯದಲ್ಲಿ ಅಮೆರಿಕದ ವಿರುದ್ಧ ಯಾವುದೇ ದಂಡನಾ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಸ್ತಾಪವಿಲ್ಲ.

ತಿಂಗಳೊಳಗೆ ಸಚಿವರು ಇನ್ನೊಮ್ಮೆ ಸಭೆ ಸೇರುತ್ತಾರೆ ಎಂದು ನಿರ್ಣಯ ತಿಳಿಸಿದೆ ಹಾಗೂ ಈ ವಿಷಯದ ಬಗ್ಗೆ ಚರ್ಚಿಸಲು ಜೋರ್ಡಾನ್‌ನಲ್ಲಿ ತುರ್ತು ಅರಬ್ ಶೃಂಗಸಮ್ಮೇಳನವೊಂದನ್ನು ಸಾಧ್ಯತೆಯನ್ನು ಜೀವಂತವಾಗಿರಿಸಿದೆ.

ರಾಜಕೀಯ ನಿರ್ಣಯ: ಅರಬ್ ಲೀಗ್ ಮುಖ್ಯಸ್ಥ

ಗಾಝಾ ಪಟ್ಟಿ ಮತ್ತು ಪಶ್ಚಿಮ ದಂಡೆಯಲ್ಲಿ ವಾಸಿಸುತ್ತಿರುವ ಫೆಲೆಸ್ತೀನೀಯರು ವ್ಯಕ್ತಪಡಿಸುತ್ತಿರುವಷ್ಟು ಆಕ್ರೋಶವನ್ನು ನಿರ್ಣಯ ಹೊಂದಿಲ್ಲ.

‘‘ನಾವೊಂದು ರಾಜಕೀಯ ನಿರ್ಣಯವನ್ನು ತೆಗೆದುಕೊಂಡಿದ್ದೇವೆ. ಇದು ಬೀದಿಗಳಲ್ಲಿ ನಡೆಯುತ್ತಿರುವುದನ್ನು ಪ್ರತಿಫಲಿಸಬೇಕೆಂದಿಲ್ಲ. ರಾಜಕೀಯ ಕೆಲಸ ಜವಾಬ್ದಾರಿಯ ಕೆಲಸವಾಗಿದೆ’’ ಎಂದು ಅರಬ್ ಲೀಗ್ ಮುಖ್ಯಸ್ಥ ಅಹ್ಮದ್ ಅಬುಲ್ ೇಟ್ ಹೇಳಿದರು.

‘‘ಜೆರುಸಲೇಂ 50 ವರ್ಷಗಳಿಂದ ಆಕ್ರಮಣಕ್ಕೊಳಗಾಗಿದೆ. ಇದು ಮುಂದುವರಿದ ಯುದ್ಧವಾಗಿದೆ. ಈ ಯುದ್ಧವು ಬಿಗಡಾಯಿಸುತ್ತದೆ’’ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News