ಜಾಗೃತ ಜನ ಸಂಘಟನೆಯಿಂದ ಮಾನವ ಹಕ್ಕಿನ ಸಂರಕ್ಷಣೆ: ಕಿಶೋರ್ ಅತ್ತಾವರ

Update: 2017-12-10 16:51 GMT

ಮಂಗಳೂರು, ಡಿ.10: ಮಾನವ ಹಕ್ಕುಗಳ ಸಂರಕ್ಷಣೆಗೆ ಜಾಗೃತ ಜನ ಸಂಘಟನೆ ಅಗತ್ಯವಿದೆ ಎಂದು ರೋಶನಿ ನಿಲಯದ ಸಮುದಾಯ ಅಧ್ಯಯನ ವಿಭಾಗದ ಮುಖ್ಯಸ್ಥ ಹಾಗೂ ಮಾನವಹಕ್ಕು ಪ್ರತಿಪಾದಕ ಕಿಶೋರ್ ಅತ್ತಾವರ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಪಿಯುಸಿಎಲ್ ಘಟಕದ ವತಿಯಿಂದ ಹಮ್ಮಿಕೊಂಡ ಜಾಗತಿಕ ಮಾನವ ಹಕ್ಕು ದಿನಾಚರಣೆಯನ್ನುದ್ದೇಶಿಸಿ ಅವರು ಇಂದು ಮಾತನಾಡುತ್ತಿದ್ದರು.

ಮಾನವರೆಲ್ಲರೂ ಘನತೆ, ಗೌರವದಿಂದ ಬದುಕುವ ಹಕ್ಕು ಎಲ್ಲರಿಗೂ ಇರಬೇಕು ಎನ್ನುವ ಆಶಯ ಮಾನವ ಹಕ್ಕುಗಳ ಪ್ರತಿಪಾದಕರಾಗಿದೆ. ಆದರೆ ವಿಶ್ವದಲ್ಲಿ ಈ ರೀತಿ ಬದುಕುವ ಹಕ್ಕು ಬೇರೆ ಬೇರೆ ಕಾರಣಕ್ಕಾಗಿ ನಿರಾಕರಿಸಲ್ಪಡುತ್ತಿದೆ. ಇತ್ತೀಚೆಗೆ ಲವ್ ಜಿಹಾದ್ ಹೆಸರಿನಲ್ಲಿ ನಡೆದಿರುವ ಹತ್ಯೆಯನ್ನು ಗಮನಿಸಿದಾಗ ಹಿಟ್ಲರ್‌ನ ಕಾಲದಲ್ಲಿ ಫ್ಯಾಸಿಸಂ ನೆಲೆಯಲ್ಲಿ ನಡೆದ ಹತ್ಯೆಗೂ ವ್ಯತ್ಯಾಸವಿಲ್ಲ ಎಂದು ಭಾಸವಾಗುತ್ತದೆ. ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆ ಅತ್ಯಂತ ಅಮಾನವೀಯವಾದ ಘಟನೆಯಾಗಿದೆ. ವಿಶ್ವದ ಯಾವೂದೇ ಕಡೆ ಈ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯಾದಾಗಲೂ ಜನರು ಅದರ ವಿರುದ್ಧ ಸಂಘಟಿತರಾಗಿ ಹೋರಾಡಬೇಕಾದ ಪರಿಸ್ಥಿತಿ ಇದೆ ಎಂದು ಕಿಶೋರ್ ಅತ್ತಾವರ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ 5 ಸಾವಿರ ಮುಲ ಗೇಣಿ ಪ್ರಕರಣಗಳು ಇತ್ಯರ್ಥವಾಗಿಲ್ಲ. ಈ ನಾಡಿನ ಮೂಲ ನಿವಾಸಿಗಳಾದ ಮಲೆಕುಡಿಯರು ಹಾಗೂ ಹಲವು ತಳ ಸಮುದಾಯದ ಜನರು ತಮಗೆ ಸ್ವಂತ ಜಮೀನು, ಮನೆ ಇಲ್ಲದೆ ಸಾಕಷ್ಟು ಅವಕಾಶಗಳಿಂದ ವಂಚಿತರಾಗಿ ಬದುಕುತ್ತಿದ್ದಾರೆ. ಈ ಸಮಸ್ಯೆಗಳು ತಳ ಸಮುದಾಯದ ಜನರ ಮಾನವಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕಿಶೋರ್ ಅತ್ತಾವರ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಿಯುಸಿಎಲ್ ಘಟಕದ ಅಧ್ಯಕ್ಷ ಕಬೀರ್ ಉಳ್ಳಾಲ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪಿಯುಸಿಎಲ್ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಪಿ.ಬಿ.ಡೇಸಾ ಮಾತನಾಡುತ್ತಾ, ಪ್ರಪಂಚದಲ್ಲಿ ಹಿಟ್ಲರ್‌ನಂತಹ ಸರ್ವಾಧಿಕಾರಿಗಳ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ನಡೆದಾಗ ಜಾಗತಿಕವಾಗಿ ಮಾನವ ಹಕ್ಕುಗಳ ಸಂಘಟನೆ ರಾಷ್ಟ್ರ ರಾಷ್ಟಗಳ ನಡುವೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಚನೆಯಾಗಿದೆ. ಭಾರತದಲ್ಲಿ ಜಯತ ಪ್ರಕಾಶ್ ನಾರಾಯಣರ ನೇತೃತ್ವದಲ್ಲಿ ಹುಟ್ಟಿಕೊಂಡ ಸಂಘಟನೆ ಮಾನವ ಘನತೆಯೊಂದಿಗೆ ಬದುಕುವ ಹಕ್ಕು ಮಾನವ ಕುಟುಂಬದ ಎಲ್ಲರಿಗೂ ಸೇರಿದೆ ಎನ್ನುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಪಿಯುಸಿಎಲ್‌ನ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜ ಅವರ ಸಾವಿನ ಬಗ್ಗೆ ಸೀಡಿ ತನಿಖೆ ನಡೆಸುತ್ತೇವೆ ಎನ್ನುವ ಭರವಸೆ ಮಾತ್ರ ದೊರೆತಿದೆ. ಮೂರು ವರ್ಷವಾದರು ಸಿಒಡಿ ತನಿಖೆ ನಡೆದಿಲ್ಲ ಎಂದು ಪಿ.ಬಿ.ಡೇಸಾ ತಿಳಿಸಿದರು.

ಸಮಾರಂಭದಲ್ಲಿ ಪಿಯುಸಿಎಲ್ ಘಟಕದ ಕಾರ್ಯದರ್ಶಿ ಆಗಸ್ಟಿನ್ ರೊಡ್ರಿಗಸ್ ವಂದಿಸಿದರು. ಇದೇ ಸಂದರ್ಭ ಪಿಯುಸಿಎಲ್ ಹೋರಾಟದ ವರದಿಗಳ ಕೃತಿಯನ್ನು ಸಭೆಯಲ್ಲಿ ಅನಾವರಣಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News