ರಾಜಕೀಯ ಹಸ್ತಕ್ಷೇಪದಿಂದ ಹದಗೆಡುತ್ತಿರುವ ಪೊಲೀಸ್ ಇಲಾಖೆ: ಜಿ.ಎ.ಬಾವಾ

Update: 2017-12-10 17:51 GMT

ಮಂಗಳೂರು, ಡಿ. 10: ಅತಿಯಾದ ರಾಜಕೀಯ ಹಸ್ತಕ್ಷೇಪದಿಂದ ಪೊಲೀಸ್ ಇಲಾಖೆ ಹದಗೆಡುತ್ತಿದೆ ಎಂದು ಕಾಂಗ್ರೆಸ್ ಮುಖಂಡರೂ ಆಗಿರುವ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ರವಿವಾರ ನಡೆದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ಅವರ ಕೈಗೆ ಬಂದ ತುತ್ತು ಕೃತಿ ಬಿಡುಗಡೆ ಹಾಗೂ ಅಂದಿನ ಮತ್ತು ಇಂದಿನ ಅಪರಾಧಗಳು, ಪೊಲೀಸರು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಮಾರು 30 ವರ್ಷಗಳ ಹಿಂದೆ ಕಿರಿಯ ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳನ್ನು ಭೇಟಿ ಮಾಡಿದರೆ ಹಿರಿಯ ಅಧಿಕಾರಿಗಳು ತರಾಟೆಗೆ ತೆಗೆದು ಕೊಳ್ಳುತ್ತಿದ್ದರು. ಆದರೆ, ಈಗ ಎಸ್‌ಪಿ, ಐಜಿಪಿ, ಡಿಜಿಪಿ ಹಂತದ ಅಧಿಕಾರಿಗಳೂ ರಾಜಕಾರಣಿಗಳ ಮನೆಯ ಬಾಗಿಲು ಕಾಯುತ್ತಿರುವುದನ್ನು ಕಾಣುತ್ತಿದ್ದೇವೆ. ಇದು ಅತ್ಯಂತ ನೋವಿನ ಸಂಗತಿ. ಇದರಿಂದ ಪೊಲೀಸರ ಗೌರವವೂ ಕುಗ್ಗುತ್ತಿದೆ ಎಂದರು.

ನೀವು ರಾಜಕೀಯದಲ್ಲಿದ್ದೂ ಹೀಗೆ ಮಾತನಾಡುತ್ತಿದ್ದೀರಲ್ಲಾ ಎಂದು ಗುರುಪ್ರಸಾದ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಾವಾ, ನಾನು ರಾಜಕೀಯ ದಲ್ಲಿದ್ದರೂ ಪೊಲೀಸರ ಕರ್ತವ್ಯದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸುವುದನ್ನು ಬೆಂಬಲಿಸುವುದಿಲ್ಲ ಎಂದರು. ಪೊಲೀಸರಿಂದ ಕೆಲವೊಮ್ಮೆ ಅಮಾಯಕ ಜನರಿಗೂ ತೊಂದರೆಗಳಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಕಾನೂನಿನ ಒಟ್ಟು ಆಶಯಕ್ಕೆ ಧಕ್ಕೆಯಾಗದಂತೆ ಕೆಲಸ ಪೊಲೀಸರು ಮಾಡಬೇಕು ಎಂದು  ಸಲಹೆ ನೀಡಿದರು.

ನಿವೃತ್ತ ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿ ಮಾತನಾಡಿ, ತಂತ್ರಜ್ಞಾನದ ಬಳಕೆ ಹೆಚ್ಚಿರುವ ಇಂದಿನ ಕಾಲದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಮಾನವ ಬುದ್ಧಿಮತ್ತೆ ಮತ್ತು ನೈಪುಣ್ಯವನ್ನೇ ಅವಲಂಬಿಸಿ ಕೆಲಸ ಮಾಡಬೇಕಾಗುತ್ತದೆ ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ ಹರೀಶ್ಚಂದ್ರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪೊಲೀಸರಿಗೆ ಮಾಹಿತಿ ಕೊಟ್ಟವರ ಹೆಸರು ಬೇಗ ಬಹಿರಂಗವಾಗುತ್ತಿದೆ. ಇದರಿಂದಾಗಿ ಅವರು ತೊಂದರೆಗೆ ಸಿಲುಕುತ್ತಾರೆ. ಮಾಹಿತಿದಾರರ ಕುರಿತು ವಿವರ ಸೋರಿಕೆ ಆಗದಂತೆ ಹಿರಿಯ ಅಧಿಕಾರಿಗಳು ಸದಾ ಎಚ್ಚರಿಕೆ ವಹಿಸಬೇಕು ಎಂದರು.

ಸಾಹಿತಿ ನಾ. ದಾಮೋದರ ಶೆಟ್ಟಿ ಅವರು ‘ಕೈಗೆ ಬಂದ ತುತ್ತು’ ಕೃತಿ ಕುರಿತು ಮಾತನಾಡಿದರು. ಮಂಗಳೂರು ನಗರ ಪೊಲೀಸ್ ಕಮಿನಷರ್ ಟಿ.ಆರ್.ಸುರೇಶ್, ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಪೆಮ್ಮಯ್ಯ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಮಿತ್ರ ಹೆರಾಜೆ ಸಂವಾದದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News