ತುಳು ಶ್ರೀಮಂತ ಭಾಷೆ: ಡಾ.ಕೆ.ಚೆನ್ನಪ್ಪ ಗೌಡ

Update: 2017-12-11 15:11 GMT

ಬಂಟ್ವಾಳ, ಡಿ.11: ಎಲ್ಲ ಭಾಷೆಯಂತೆ ತುಳು ಕೂಡ ಶ್ರೀಮಂತ ಭಾಷೆಯಾಗಿದೆ. ತುಳುವಿನ ಕುರಿತಾದ ವಿಚಾರಗಳನ್ನು ಕೇಳುವುದರ, ನೋಡುವುದರ ಜೊತೆಗೆ ಓದುವ ಪರಂಪರೆಯನ್ನು ಬೆಳಸಿಕೊಳ್ಳಬೇಕು ಎಂದು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಕೆ.ಚೆನ್ನಪ್ಪ ಗೌಡ ಹೇಳಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಬಂಟ್ವಾಳ ತಾಲೂಕು ತುಳು ಸಾಹಿತ್ಯ ಸಮ್ಮೇಳನ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ಕಲಾಮಂದಿರದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಪ್ರಥಮ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ತುಳುವಿನ ಬಗ್ಗೆ ಧನಾತ್ಮಕ ಚಿಂತನೆ ಬೆಳೆಸಬೇಕು. ಭಾಷೆ, ಸಾಹಿತ್ಯದ ಅರಿವು, ಅಭಿಮಾನ ಮೂಡಿಸುವ ಕೆಲಸವಾಗಬೇಕು ಎಂದರು.
ಹಿರಿಯ ಪತ್ರಕರ್ತ, ಸಮ್ಮೇಳನಾಧ್ಯಕ್ಷ ಜಯರಾಮ ರೈ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದ 8 ನೆ ಪರಿಚ್ಚೇದಕ್ಕೆ ತುಳುವಿಗೆ ಮಾನ್ಯತೆ ಆದಷ್ಟು ಶೀಘ್ರ ದೊರಕುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಯಬೇಕು. ತುಳುವೇ ಮಂತ್ರ, ತುಳುವೇ ಎಲ್ಲಕ್ಕೂ ಶಕ್ತಿ ಎಂದರು.
ಇದೇ ವೇಳೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಹಾಗೂ ದೈವರಾಧನೆಯಲ್ಲಿ ಜನಪ್ರಿಯರಾಗಿರುವ ದೇಜಪ್ಪ ಬಾಚಕೆರೆ ಅವರಿಗೆ "ತುಳು ಸಿರಿ"ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಬಾಕ್ಸ್......
13 ಮಂದಿ ಸಾಧಕರಿಗೆ ಸಮ್ಮಾನ:
ಹಾಗೆಯೇ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಿರಿರಾಜ ವಗ್ಗ (ರಂಗಕರ್ಮಿ), ಬಿ.ಆರ್.ಕುಲಾಲ್ (ರಂಗಭೂಮಿ), ಕಾಂತಪ್ಪ ಶೆಟ್ಟಿ(ಪುಲಮದ್9), ವಾಸು ಪಂಡಿತ ಸರಪಾಡಿ (ಪುಲಮದ್9), ಅಣ್ಣುಪೂಜಾರಿ ಅಮ್ಟಾಡಿ(ಕಂಬುಲ), ಗೌರಿ ಪಾಲ್ತಾಜೆ(ಪೆದೆತಿ), ಎಸ್.ರಹಿಮಾನ್ ಸಾಹೇಬ್(ಉರಗ ಸಂರಕ್ಷಣೆ), ಮೀನಾಕ್ಷಿ ಆಚಾರ್ಯ ಬಿ.ಸಿ.ರೋಡ್ (ಪುಲಮದ್9), ವಿಶ್ವನಾಥ ಶೆಟ್ಟಿ ಸೋರ್ನಾಡು(ಯಕ್ಷಗಾನ), ನಾರಾಯಣದಾಸ ಕಕ್ಕೆಪದವು ( ಧರ್ಮಕಜ್ಜ), ಅಂತೋನಿ ಪಿಂಟೋ ಪೆರ್ನೆ(ಕಂಡ ಸಾಗೋಳಿ), ಶಶಿ ಬಂಡಿಮಾರ್ ( ತುಳು ಪತ್ರಿಕೆ), ಶೇಖರ ಪಂಬದ ಸಜೀಪ(ದೈವರಾಧನೆ)ರವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ವಿವಿಧ ತುಳು ಗೊಬ್ಬಲು ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
 ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ತಹಶೀಲ್ದಾರ್ ಪುರಂದರ ಹೆಗ್ಡೆ, ಅಕಾಡೆಮಿಯ ರಿಜಿಸ್ಟರ್ ಚಂದ್ರಹಾಸ ರೈ ಅವರು ಸಮಯೋಚಿತವಾಗಿ ಮಾತನಾಡಿ, ತುಳು ಸಾಹಿತ್ಯ ಸಮ್ಮೇಳನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿರುವುದಕ್ಕೆ ಅಭಿನಂದಿಸಿದರು.
ಇದೇ ವೇಳೆ ಜಯರಾಮ ರೈ ಮಲಾರ್, ಸಮ್ಮೇಳನ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಅವರನ್ನು ಗೌರವಿಸಲಾಯಿತು.
   ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಸದಸ್ಯೆ ವಿಜಯ ಶೆಟ್ಟಿ ಸಾಲೆತ್ತೂರು, ಶಾಸಕಿ ಶಕುಂತಳಾ ಶೆಟ್ಟಿ, ಗೇರು ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಪುರಸಭಾ ಸದಸ್ಯ ಭಾಸ್ಕರ ಟೈಲರ್, ಸಮೇಳನ ಸಮಿತಿಯ ಪ್ರ.ಕಾರ್ಯದರ್ಶಿ ಡಿ.ಎಂ.ಕುಲಾಲ್, ಖಜಾಂಚಿ ಸುಭಾಶ್‌ಚಂದ್ರ ಜೈನ್ ಅವರು ವೇದಿಕೆಯಲ್ಲಿದ್ದರು.
ಅಕಾಡೆಮಿ ಸಮಿತಿ ಸದಸ್ಯ ಗೋಪಾಲ ಅಂಚನ್ ತುಳು ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರಬೇಕು ಹಕ್ಕೊತ್ತಾಯವನ್ನು ಮಂಡಿಸಿದರು.
ಸಮ್ಮೇಳನ ಸಮಿತಿ ಅಧ್ಯಕ್ಷ ಸುದರ್ಶನ ಜೈನ್ ಸ್ವಾಗತಿಸಿ, ಸೇಸಪ್ಪ ಮಾಸ್ಟರ್ ವಂದಿಸಿ, ಮಲ್ಲಿಕಾ ಶೆಟ್ಟಿ, ದಿನೇಶ್ ಸುವರ್ಣ ನಿರೂಪಿಸಿದರು.
ಇದಕ್ಕೂ ಮೊದಲು ಚಾವಡಿ ಪಟ್ಟಾಂಗ, ತುಳು ಹಾಡುಗಳ ಗಾಯನ, ಕವಿಗೋಷ್ಠಿ,ಸಾಗೋಳಿದ ಎರ್ತೆ, ಜಪ್ಪೆಲ್, ಕುರಿತ ಚಾವಡಿ ಪಟ್ಟಾಂಗ, ತುಳು ರಂಗ್ ರಂಗೀತೊ ಲೇಸ್ ಕಾರ್ಯಕ್ರಮ ನಡೆಯಿತು.
ಕೊನೆಗೆ ಎಲ್ಲ ಗಣ್ಯರ ಸಮ್ಮುಖದಲ್ಲಿ ಧ್ವಜ ಅವರೋಹಣ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ತುಳು ಜಾನಪದ ಕಲಿಕೆ, ತುಳು ಯಕ್ಷ ಹಾಸ್ಯ ವೈಭವ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News