ಬ್ರಿಟನ್‌ನಲ್ಲಿ 4 ವರ್ಷಗಳಲ್ಲೇ ಅಧಿಕ ಹಿಮಪಾತ

Update: 2017-12-11 16:54 GMT

ಲಂಡನ್, ಡಿ. 11: ಬ್ರಿಟನ್‌ನಲ್ಲಿ ರವಿವಾರ ನಾಲ್ಕು ವರ್ಷಗಳಲ್ಲೇ ಅತ್ಯಧಿಕ ಹಿಮಪಾತವಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಅದೇ ವೇಳೆ, ಜರ್ಮನಿಯ ಆರ್ಥಿಕ ರಾಜಧಾನಿ ಫ್ರಾಂಕ್‌ಫರ್ಟ್‌ನ ವಿಮಾನ ನಿಲ್ದಾಣದಲ್ಲಿ 300ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ ಹಾಗೂ ಫ್ರಾನ್ಸ್‌ನ ಕಲಾಯಿಸ್ ಬಂದರಿನಲ್ಲಿ ನೌಕೆಯೊಂದು ಮಂಜಿನಲ್ಲಿ ಸಿಕ್ಕಿಹಾಕಿಕೊಂಡಿದೆ.

ಫ್ರಾಂಕ್‌ಫರ್ಟ್ ಮತ್ತು ಬ್ರಿಟನ್‌ನ ವಿಮಾನ ನಿಲ್ದಾಣಗಳಲ್ಲಿ ನೂರಾರು ಪ್ರಯಾಣಿಕರು ಸಿಕ್ಕಿಹಾಕಿಕೊಂಡಿದ್ದಾರೆ.

ಫ್ರಾಂಕ್‌ಫರ್ಟ್ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾದ ಬಳಿಕ ಹಾಗೂ ಉಷ್ಣತೆ ಶೂನ್ಯ ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕೆಳಗೆ ಕುಸಿದ ಬಳಿಕ ಸುಮಾರು 330 ವಿಮಾನಗಳ ಹಾರಾಟವನ್ನು ರವಿವಾರ ಸಂಜೆ 5 ಗಂಟೆಯ ವೇಳೆಗೆ ರದ್ದುಪಡಿಸಲಾಯಿತು ಎಂದು ವಿಮಾನ ನಿಲ್ದಾಣದ ವಕ್ತಾರರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಜರ್ಮನಿಯ ಅತ್ಯಂತ ನಿಬಿಡ ವಿಮಾನ ನಿಲ್ದಾಣವಾಗಿರುವ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ರವಿವಾರ ಒಟ್ಟು 1,260 ವಿಮಾನಗಳ ಹಾರಾಟ ಮತ್ತು ಭೂಸ್ಪರ್ಶಗಳು ನಡೆಯಬೇಕಾಗಿತ್ತು.

ಬ್ರಿಟನ್‌ನ ಬರ್ಮಿಂಗ್‌ಹ್ಯಾಂ ವಿಮಾನ ನಿಲ್ದಾಣದಲ್ಲಿಯೂ ರವಿವಾರ ಬೆಳಗ್ಗಿನ ಎಲ್ಲ ವಿಮಾನಗಳನ್ನು ರದ್ದುಪಡಿಸಲಾಯಿತು. ರನ್‌ವೇಯಲ್ಲಿ ಬಿದ್ದಿದ್ದ ಹಿಮದ ರಾಶಿಯನ್ನು ತೆರವುಗೊಳಿಸುವ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News