ಚಿಲ್ಲರೆ ಹಣದುಬ್ಬರ 15 ತಿಂಗಳಲ್ಲೇ ಹೆಚ್ಚಿನ ಮಟ್ಟಕ್ಕೆ ಏರಿಕೆ: ಕೈಗಾರಿಕಾ ಉತ್ಪಾದನಾ ಬೆಳವಣಿಗೆ ಕುಂಠಿತ

Update: 2017-12-12 15:52 GMT

ಹೊಸದಿಲ್ಲಿ, ಡಿ.12: ಅಕ್ಟೋಬರ್‌ನಲ್ಲಿ 3.58% ಇದ್ದ ಚಿಲ್ಲರೆ ಅಥವಾ ಗ್ರಾಹಕ ಹಣದುಬ್ಬರವು 15 ತಿಂಗಳಲ್ಲೇ ಅತ್ಯಂತ ಹೆಚ್ಚಿನ ಮಟ್ಟವನ್ನು ತಲುಪಿದ್ದು ನವೆಂಬರ್‌ನಲ್ಲಿ 4.88 ಶೇಕಡಾಕ್ಕೆ ತಲುಪಿದೆ. ಆಹಾರ ಪದಾರ್ಥಗಳು ಮತ್ತು ಇಂಧನಗಳ ಬೆಲೆಯಲ್ಲಿ ಉಂಟಾಗಿರುವ ಏರಿಕೆಯೇ ಹಣದುಬ್ಬರ ಈ ರೀತಿಯ ಜಿಗಿತ ಕಾಣಲು ಕಾರಣ ಎಂದು ಹೇಳಲಾಗುತ್ತದೆ.

ನವೆಂಬರ್‌ನ ಹಣದುಬ್ಬರವು ರಿಸರ್ವ್ ಬ್ಯಾಂಕ್‌ನ ಶೇಕಡಾ 4 ಮಧ್ಯಮ ಅವಧಿ ಗುರಿಗಿಂತ ಹೆಚ್ಚಾಗಿದ್ದು ಸೆಂಟ್ರಲ್ ಬ್ಯಾಂಕ್ ಭವಿಷ್ಯದಲ್ಲಿ ದರ ಕಡಿತ ಮಾಡಲು ಸಾಧ್ಯವಿಲ್ಲದಂತೆ ಮಾಡಿದೆ. ಈ ಹಿಂದೆ ಆರ್ಥಿಕತಜ್ಷರು ನವೆಂಬರ್‌ನಲ್ಲಿ ಹಣದುಬ್ಬರ 4.2 ಶೇಕಡಾಕ್ಕೆ ಏರಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಅನಿಯಮಿತವಾಗಿ ಸುರಿದ ಮಳೆಯಿಂದಾಗಿ ತರಕಾರಿ ಬೆಲೆಗಳಲ್ಲಿ ಉಂಟಾದ ಏರಿಕೆಯ ಹಿನ್ನೆಲೆಯಲ್ಲಿ ಈ ಲೆಕ್ಕಾಚಾರ ಮಾಡಲಾಗಿತ್ತು. ತರಕಾರಿ ಬೆಲೆಗಳಲ್ಲಿ ನವೆಂಬರ್ ತಿಂಗಳವರೆಗೆ ಶೇಕಡಾ 22.48 ಏರಿಕೆಯಾಗುವ ಮೂಲಕ ದರಗಳು ಗಗನಮುಖಿಯಾದರೆ ಇಂಧನ ಬೆಲೆಗಳು ಕೂಡಾ ಶೇಕಡಾ 8ರಷ್ಟು ಏರಿಕೆ ಕಂಡಿರುವುದು ಹಣದುಬ್ಬರ ಈ ಮಟ್ಟ ತಲುಪಲು ಕಾರಣವಾಗಿದೆ.

 ಆರ್‌ಬಿಐ ತನ್ನ ಡಿಸೆಂಬರ್ 6ರ ನೀತಿ ಸಭೆಯಲ್ಲಿ ಮಾರ್ಚ್‌ನಲ್ಲಿ ಕೊನೆಗೊಳ್ಳುವಂತೆ ಮುಂದಿನ ಆರು ತಿಂಗಳಿಗೆ ಹಣದುಬ್ಬರ ಪ್ರಕ್ಷೇಪವನ್ನು 10 ಮೂಲ ಅಂಕಗಳಷ್ಟು ಏರಿಸಿ ಶೇಕಡಾ 4.3ರಿಂದ 4.7ರವರೆಗೆ ಏರಿಸಿತ್ತು. ಬಡ್ಡಿ ದರಗಳನ್ನು ಸ್ಥಿರವಾಗಿರಿಸಿದ ಆರ್‌ಬಿಐ ನೀತಿಯಲ್ಲಿ ತಟಸ್ಥ ನಿಲುವನ್ನು ತಳೆದಿತ್ತು. ಕುಸಿಯುತ್ತಿರುವ ಹಣದುಬ್ಬರದ ಮಧ್ಯೆಯೂ ಆರ್‌ಬಿಐ 2015ರ ಜನವರಿಯಿಂದ ಈ ವರ್ಷದ ಆಗಸ್ಟ್‌ವರೆಗೆ ಬಡ್ಡಿ ದರಗಳಲ್ಲಿ 200 ಮೂಲಕ ಅಂಕಗಳನ್ನು ಕಡಿತಗೊಳಿಸಿತ್ತು. ಮುಂದಿನ ವರ್ಷದ ಮಧ್ಯದ ವರೆಗೂ ಆರ್‌ಬಿಐ ಬಡ್ಡಿ ದರವನ್ನು ಸ್ಥಿರವಾಗಿಡಲಿದೆ ಎಂದು ಆರ್ಥಿಕತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಹಣದುಬ್ಬರು ನಿರೀಕ್ಷಿತ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಏರಿಕೆ ಕಂಡಿದೆ. ಹಣದುಬ್ಬರದಿಂದ ಉಂಟಾಗಿರುವ ಒತ್ತಡವು ಸ್ಪಷ್ಟವಾಗಿದೆ. ನನ್ನ ಪ್ರಕಾರ ಈ ವಿತ್ತೀಯ ವರ್ಷದಲ್ಲಿ ಯಾವುದೇ ದರ ಕಡಿತ ಮಾಡುವುದು ಅಸಾಧ್ಯ. ಮುಂದಿನ ಆರು ತಿಂಗಳವರೆಗೆ ಆರ್‌ಬಿಐ ನಿಲುವಿನಲ್ಲಿ ಯಾವುದೇ ಬದಲಾವಣೆ ಬರುವುದು ಅನುಮಾನ ಎಂದು ಇಂಡಿಯಾ ರೇಟಿಂಗ್ಸ್‌ನ ನಿರ್ದೇಶಕ ಮತ್ತು ಮುಖ್ಯ ಆರ್ಥಿಕತಜ್ಞ ಸುನೀಲ್ ಸಿನ್ಹಾ ತಿಳಿಸುತ್ತಾರೆ.

ಇದೇ ವೇಳೆ ಸರಕು ಮತ್ತು ಸೇವಾ ತೆರಿಗೆಯ ಅನುಷ್ಠಾನದಿಂದ ಬೇಡಿಕೆಯಲ್ಲಿ ಕುಸಿತ ಉಂಟಾಗಿರುವ ಪರಿಣಾಮ ಸೆಪ್ಟೆಂಬರ್‌ನಲ್ಲಿ 4.1 ಶೇಕಡಾ ಇದ್ದ ಕೈಗಾರಿಕಾ ಉತ್ಪಾದನಾ ಬೆಳವಣಿಗೆಯು ಅಕ್ಟೋಬರ್ ಹೊತ್ತಿಗೆ ಶೇಕಡಾ 2.2 ತಲುಪಿದೆ. ಹೊಸ ತೆರಿಗೆ ನೀತಿಯ ಜಾರಿಯಿಂದ ಹಲವು ತಿಂಗಳ ಕುಸಿತ ಕಂಡಿದ್ದ ಆರ್ಥಿಕ ಬೆಳವಣಿಗೆಯು ಸೆಪ್ಟೆಂಬರ್ ನಂತರ ಸ್ವಲ್ಪ ಏರಿಕೆ ಕಾಣಲು ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News