ಅಮರನಾಥ ಮಂದಿರದಲ್ಲಿ ಮಂತ್ರಗಳ ಪಠಣ,ಘಂಟಾನಾದಕ್ಕೆ ಎನ್‌ಜಿಟಿ ನಿಷೇಧ

Update: 2017-12-13 13:53 GMT

ಹೊಸದಿಲ್ಲಿ,ಡಿ.13: ಜಮ್ಮು-ಕಾಶ್ಮೀರದಲ್ಲಿ ಸಮುದ್ರಮಟ್ಟದಿಂದ 3,888 ಮೀ.ಎತ್ತರ ದಲ್ಲಿರುವ ಪ್ರಸಿದ್ಧ ಅಮರನಾಥ ಗುಹಾಮಂದಿರಲ್ಲಿ ಮಂತ್ರಗಳ ಪಠಣವನ್ನು ನಿಷೇಧಿಸಿ ಬುಧವಾರ ಆದೇಶಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವು, ಅಮರನಾಥ ದೇವಸ್ಥಾನ ಮಂಡಳಿಯು ಅನುಷ್ಠಾನಿಸಬೇಕಾದ ಹಲವಾರು ನಿರ್ದೇಶಗಳನ್ನು ಹೊರಡಿಸಿದೆ. ಯಾತ್ರಿಗಳಿಗೆ ಸಾಕಷ್ಟು ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ವೈಫಲ್ಯಕ್ಕಾಗಿ ಕಳೆದ ತಿಂಗಳು ಮಂಡಳಿಯನ್ನು ತರಾಟೆಗೆತ್ತಿಕೊಂಡಿದ್ದ ಎನ್‌ಜಿಟಿಯು, ಸ್ಥಿತಿಗತಿ ವರದಿಯೊಂದನ್ನು ಡಿಸೆಂಬರ್ ಮೊದಲ ವಾರದಲ್ಲಿ ಸಲ್ಲಿಸುವಂತೆ ಅದಕ್ಕೆ ಸೂಚಿಸಿತ್ತು.

 ಗುಹಾ ಮಂದಿರದಲ್ಲಿ ಘಂಟೆಗಳನ್ನು ಬಾರಿಸಬಾರದು ಹಾಗು ಯಾತ್ರಿಗಳು ತಮ್ಮ ಮೊಬೈಲ್ ಮತ್ತು ಇತರ ಸೊತ್ತುಗಳನ್ನು ಕೊನೆಯ ತನಿಖಾ ಠಾಣೆಯಲ್ಲಿ ಠೇವಣಿಯಿಡಬೇಕು ಎಂದು ತಾಕೀತು ಮಾಡಿದ ಎನ್‌ಜಿಟಿ ಅಧ್ಯಕ್ಷ ನ್ಯಾ.ಸ್ವತಂತರ್ ಕುಮಾರ್ ನೇತೃತ್ವದ ಪೀಠವು, ಜನರು ತಮ್ಮ ಸೊತ್ತುಗಳನ್ನಿಡಲು ಪ್ರತ್ಯೇಕ ಕೋಣೆಯ ನಿರ್ಮಾಣವನ್ನು ಪರಿಶೀಲಿಸುವಂತೆ ದೇವಸ್ಥಾನದ ಅಧಿಕಾರಿಗಳಿಗೆ ಸೂಚಿಸಿತು.

ಮಂದಿರದಲ್ಲಿ ಮಂತ್ರಗಳ ಪಠಣ ಅಥವಾ ಜೈಕಾರಗಳು ನಡೆಯಕೂಡದು ಎಂದ ಪೀಠವು ತನ್ನ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಂಡಳಿಗೆ ತಿಳಿಸಿತು. ಕೊನೆಯ ತನಿಖಾ ಠಾಣೆಯಿಂದ ಮುಖ್ಯ ಗುಹೆಯವರೆಗೆ ಒಂದೇ ಸರದಿ ಸಾಲು ಇರಬೇಕು ಎಂದೂ ಅದು ನಿರ್ದೇಶ ನೀಡಿತು.

 ಎನ್‌ಜಿಟಿಯು ಕಳೆದ ತಿಂಗಳು ಜಮ್ಮು-ಕಾಶ್ಮೀರದಲ್ಲಿಯ ಇನ್ನೊಂದು ಪ್ರಸಿದ್ಧ ಯಾತ್ರಾಸ್ಥಳ ವೈಷ್ಣೋದೇವಿ ಮಂದಿರಕ್ಕಾಗಿಯೂ ಇಂತಹುದೇ ನಿರ್ದೇಶಗಳನ್ನು ಹೊರಡಿಸಿತ್ತಲ್ಲದೆ, ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಿಗಳ ಸಂಖ್ಯೆಯನ್ನು ದಿನವೊಂದಕ್ಕೆ 50,000ಕ್ಕೆ ಸೀಮಿತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News