2022ರ ವೇಳೆಗೆ ಉದ್ಯೋಗ ಕ್ಷೇತ್ರದಲ್ಲಿ ಭಾರೀ ಬದಲಾವಣೆ: ಸಮೀಕ್ಷಾ ವರದಿ

Update: 2017-12-13 14:08 GMT

ಹೊಸದಿಲ್ಲಿ, ಡಿ.13: ದಿನೇ ದಿನೇ ಹೊಸ ತಂತ್ರಜ್ಞಾನಗಳು ಬೆಳಕಿಗೆ ಬರುತ್ತಿದ್ದು 2022ರ ವೇಳೆಗೆ ದೇಶದ ಅಂದಾಜು 600 ಮಿಲಿಯನ್ ಕಾರ್ಮಿಕರಲ್ಲಿ ಸುಮಾರು ಶೇ.9ರಷ್ಟು ಕಾರ್ಮಿಕರು ಈಗ ಅಸ್ತಿತ್ವದಲ್ಲಿಯೇ ಇರದ ಹೊಸ ಉದ್ಯೋಗದಲ್ಲಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಶೇ.37ರಷ್ಟು ಮಂದಿ ಅಮೂಲಾಗ್ರ ಬದಲಾವಣೆ ಹೊಂದಿದ ಕೌಶಲ್ಯ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ವರದಿಯೊಂದು ತಿಳಿಸಿದೆ.

ಮುಂದಿನ ಎರಡು ವರ್ಷಗಳ ಉದ್ಯೋಗಕ್ಷೇತ್ರದಲ್ಲಿ ಮಂದಗತಿ ಇರಲಿದ್ದರೆ 2022ರ ವೇಳೆಗೆ ಸಂಪೂರ್ಣ ಉದ್ಯೋಗ ಕ್ಷೇತ್ರದಲ್ಲಿ ತೀವ್ರ ಪ್ರಮಾಣದ ಬದಲಾವಣೆಯಾಗಲಿದೆ ಎಂದು ‘ಎಫ್‌ಸಿಸಿಐ-ನಾಸ್‌ಕಾಮ್ ಆ್ಯಂಡ್ ಇವೈ’ ವರದಿಯಲ್ಲಿ ತಿಳಿಸಲಾಗಿದೆ.

      ಜಾಗತೀಕರಣ, ಜನಸಂಖ್ಯಾ ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಭಾವ ಇದಕ್ಕೆ ಕಾರಣವಾಗಿದೆ . 2017ರಲ್ಲಿರುವ ಉದ್ಯೋಗಗಳಲ್ಲಿ (ಹಾಲಿ) ಶೇ.21ರಷ್ಟು ಉದ್ಯೋಗಗಳು 2022ರ ವೇಳೆ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿ ಬರಬಹುದು. 2022ರ ವೇಳೆಗೆ ಸಂಘಟಿತ ಉತ್ಪಾದನಾ ಮತ್ತು ಸೇವಾಕ್ಷೇತ್ರದ ಉದ್ಯೋಗಗಳು ಈಗಿನ 38 ಮಿಲಿಯನ್‌ನಿಂದ 48 ಮಿಲಿಯನ್‌ಗೆ ಹೆಚ್ಚಬಹುದು ಎಂದು ವರದಿ ತಿಳಿಸಿದೆ.

   ಭಾರತದ ಸಂಸ್ಥೆಗಳು ಗತೀಯ ತಂತ್ರಜ್ಞಾನಗಳನ್ನು ತ್ವರಿತವಾಗಿ ಅಂಗೀಕರಿಸುವುದರಿಂದ ಸಾಗಣೆ, ಕ್ಯಾಟರಿಂಗ್, ಸಾಫ್ಟ್‌ವೇರ್ ಅಭಿವೃದ್ಧಿ ಸೇವೆ ಮುಂತಾದ ಅಸಂಘಟಿತ ಕ್ಷೇತ್ರಗಳಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಇವೈಯ ಪಾಲುದಾರ ಅನುರಾಗ್ ಮಲಿಕ್ ತಿಳಿಸಿದ್ದಾರೆ.

  2022ರ ವೇಳೆಗೆ ಅಸ್ತಿತ್ವಕ್ಕೆ ಬರಲಿರುವ ಹೊಸ ಉದ್ಯೋಗಗಳಿಂದ ‘ಸಂಘಟಿತ ಕ್ಷೇತ್ರ’ಕ್ಕೆ ಶೇ.20ರಿಂದ 25ರಷ್ಟು ಹೆಚ್ಚುವರಿ ಸೇರ್ಪಡೆಯಾಗಬಹುದು. ಇದರಿಂದ ಒಟ್ಟು ಅರ್ಥವ್ಯವಸ್ಥೆಯಲ್ಲಿ ಸಂಘಟಿತ ಕ್ಷೇತ್ರದ ಪಾಲು ಈಗಿರುವ ಶೇ.8ರಿಂದ ಶೇ.10ಕ್ಕೆ ಏರಿಕೆಯಾಗಬಹುದು ಎಂದು ವರದಿ ತಿಳಿಸಿದೆ(600 ಮಿಲಿಯನ್ ಕಾರ್ಯಪಡೆಯಲ್ಲಿ ಸುಮಾರು 60 ಮಿಲಿಯನ್).

130ಕ್ಕೂ ಹೆಚ್ಚು ಉದ್ಯಮಿಗಳು, ವಿದ್ವಾಂಸರು ಹಾಗೂ ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ ಈ ವರದಿ ತಯಾರಿಸಲಾಗಿದೆ ಎಂದು ಇವೈ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News