ಸಂಘ ಪರಿವಾರದಿಂದ ಕೋಮುಗಲಭೆ ಸೃಷ್ಟಿ: ಮುಸ್ಲಿಂ ಸಂಘಟನೆಗಳ ಆರೋಪ

Update: 2017-12-13 14:24 GMT

ಮಂಗಳೂರು, ಡಿ.13: ಹೊನ್ನಾವರದಲ್ಲಿ ಪರೇಶ್ ಮೇಸ್ತ ನಿಗೂಢ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಸಂಘ ಪರಿವಾರವು ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ಆರೋಪಿಸಿದೆ.

ಪರೇಶ್ ಮೇಸ್ತನನ್ನು ಕೊಲೆ ಮಾಡಲಾಗಿದೆ, ಮುಖಕ್ಕೆ ಆ್ಯಸಿಡ್ ಎರಚಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಕರಾವಳಿಯಲ್ಲಿ ಮತ್ತೆ ಕೋಮು ಗಲಭೆ ನಡೆಸುವ ಸಂಚಿನ ಭಾಗವಾಗಿದೆ. ಪೊಲೀಸ್ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಜರಗಿಸಬೇಕು ಎಂದು ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ಒತ್ತಾಯಿಸಿದ್ದಾರೆ.

ಮುಸ್ಲಿಂ ವರ್ತಕರ ಸಂಘ: ಹೊನ್ನಾವರದಲ್ಲಿ ನಡೆದ ನಿಗೂಢ ಸಾವಿನ ಬಗ್ಗೆ ಪೊಲೀಸ್ ಇಲಾಖೆಯು ಸ್ಪಷ್ಟೀಕರಣ ನೀಡಿದ್ದರೂ ಕೂಡ ಸಂಘ ಪರಿವಾರವು ಗಲಭೆ ಸೃಷ್ಟಿಸುವ ಸಲುವಾಗಿ  ಆರೋಪ, ಪ್ರತಿಭಟನೆ ನಡೆಸಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಅಷ್ಟೇ ಅಲ್ಲದೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಇದರಿಂದ ಮುಸ್ಲಿಂ ಸಮಾಜ ಭಯಭೀತಿಗೊಂಡಿದ್ದು, ತಕ್ಷಣ ರಾಜ್ಯ ಸರಕಾರ ಸಮಾಜ ಘಾತುಕ ಶಕ್ತಿಗಳನ್ನು ಹದ್ದುಬಸ್ತಿನಲ್ಲಿಡಲು ಮುಂದಾಗಬೇಕು ಎಂದು ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಆಗ್ರಹಿಸಿದ್ದಾರೆ.

ಮುಸ್ಲಿಂ ಸಂಘಟನೆಗಳ ಒಕ್ಕೂಟ: ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಹತ್ಯೆಯಾಗಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿರುವ ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್, ಪರೇಶ್ ಮೇಸ್ತ ನಿಗೂಢ ಸಾವಿನ ಪ್ರಕರಣವನ್ನು ಮುಂದಿಟ್ಟುಕೊಂಡು ಸಂಘ ಪರಿವಾರದವು ಕುಮಟಾ ಮತ್ತು ಶಿರಸಿಯಲ್ಲಿ ನಡೆಸುತ್ತಿರುವ ಕೃತ್ಯ ಹಾಗೂ ಬಿಜೆಪಿ ಕೂಡ ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿರುವುದು ಖಂಡನೀಯ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News