2017-18ನೇ ಸಾಲಿಗೆ ಭಾರತದ ಜಿಡಿಪಿ ಅಂದಾಜನ್ನು ಶೇ.6.7ಕ್ಕೆ ತಗ್ಗಿಸಿದ ಏಷ್ಯನ್ ಅಭಿವೃದ್ಧಿ ಬ್ಯಾಂಕ್

Update: 2017-12-13 15:29 GMT

ಹೊಸದಿಲ್ಲಿ,ಡಿ.13: ಏಷ್ಯನ್ ಅಭಿವೃದ್ಧಿ ಬ್ಯಾಂಕ್(ಎಡಿಬಿ)2017-18ನೇ ಸಾಲಿಗೆ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜು ದರವನ್ನು ಬುಧವಾರ ಈ ಮೊದಲಿನ ಶೇ.7ರಿಂದ ಶೇ.6.7ಕ್ಕೆ ತಗ್ಗಿಸಿದೆ. ಜಾಗತಿಕ ಕಚ್ಚಾ ತೈಲಬೆಲೆಗಳಲ್ಲಿ ಏರಿಕೆ ಮತ್ತು ನಾಜೂಕಿನ ಖಾಸಗಿ ಹೂಡಿಕೆಯಿಂದಾಗಿ ಭಾರತೀಯ ಆರ್ಥಿಕತೆಯ ಚೇತರಿಕೆಯು ಕುಂಠಿತಗೊಂಡಿದೆ ಎಂದು ಹೇಳಿರುವ ಎಡಿಬಿ, 2018ನೇ ಸಾಲಿನ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನೂ ಶೇ.8.3ರಿಂದ ಶೇ.7.3ಕ್ಕೆ ಇಳಿಸಿದೆ.

2017-18ರ ಪೂರ್ವಾರ್ಧದಲ್ಲಿಯ ನೀರಸ ಬೆಳವಣಿಗೆ, ಇನ್ನೂ ಹೊಗೆಯಾಡು ತ್ತಿರುವ ನೋಟು ನಿಷೇಧದ ಪರಿಣಾಮಗಳು, ಜಿಎಸ್‌ಟಿ ವ್ಯವಸ್ಥೆಯ ತಾತ್ಕಾಲಿಕ ಸವಾಲುಗಳು ಮತ್ತು 2017ರಲ್ಲಿ ಮಳೆಯ ಕೊರತೆಯಿಂದಾಗಿ ಕೃಷಿ ಇಳುವರಿ ಸ್ವಲ್ಪ ಕುಸಿಯುವ ಸಾಧ್ಯತೆ ಇವುಗಳಿಂದಾಗಿ ಭಾರತದ ಆರ್ಥಿಕತೆಯು ಕಳೆದ ಸೆಪ್ಟೆಂಬರ್‌ನಲ್ಲಿ ಅಂದಾಜಿಸಿದ್ದ ಶೇ.7ರ ಬದಲು ಶೇ.6.7 ದರದಲ್ಲಿ ಬೆಳೆಯುವ ನಿರೀಕ್ಷೆಯನ್ನು ಈಗ ಹೊಂದಲಾಗಿದೆ ಎಂದು ಬ್ಯಾಂಕ್ ತನ್ನ ಪೂರಕ ವರದಿಯಲ್ಲಿ ಹೇಳಿದೆ ಎಂದು ಎಡಿಬಿಯ ಮುಖ್ಯ ಆರ್ಥಿಕತಜ್ಞ ಯಸುಯಿಕಿ ಸವಾಡಾ ಹೇಳಿದರು.

ಹಿಂದಿನ ಐದು ತ್ರೈಮಾಸಿಕಗಳಿಗೆ ಹೋಲಿಸಿದರೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಶೇ.6.3 ಪ್ರಗತಿದರವನ್ನು ದಾಖಲಿಸಿ ಚೇತರಿಕೆಯ ದಾರಿಗೆ ಮರಳಿರುವ ಸಂದರ್ಭದಲ್ಲಿಯೇ ಎಡಿಬಿಯ ಈ ಪ್ರಗತಿ ಅಂದಾಜು ಹೊರಬಿದ್ದಿದೆ.

ಆದರೆ ಅದು ನೆರೆಯ ಚೀನಾಕ್ಕೆ ಈ ಹಿಂದೆ ಅಂದಾಜಿಸಿದ್ದ ಶೇ.6.7ರ ಆರ್ಥಿಕ ಪ್ರಗತಿ ದರವನ್ನು ಶೇ.6.8ಕ್ಕೆ ಹೆಚ್ಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News