ಮಾನವ ಹಕ್ಕುಗಳ ರಕ್ಷಣೆ ಮನೋಭಾವ ಹೃದಯದಿಂದ ಹುಟ್ಟಬೇಕು: ನ್ಯಾ. ಬೀಳಗಿ

Update: 2017-12-13 14:50 GMT

ಮಂಗಳೂರು, ಡಿ.13: ಮಾನವ ಹಕ್ಕುಗಳ ರಕ್ಷಣೆಯ ಮನೋಭಾವ ಹೃದಯದಿಂದ ಹುಟ್ಟಬೇಕು. ನಮ್ಮ ಮನೆ, ಪರಿಸರದಲ್ಲಿ ನಮ್ಮ ಹಕ್ಕುಗಳನ್ನು ಸರಿಯಾಗಿ ನಿಭಾಯಿಸಿದರೆ ಬೇರೆಯವರ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಕೆ.ಎಸ್. ಬೀಳಗಿ ಹೇಳಿದ್ದಾರೆ.

ಅವರು ಇಂದು ರಾಜ್ಯ ಮಾನವ ಹಕ್ಕು ಆಯೋಗ, ದ.ಕ. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಗರದ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವ ಹಕ್ಕುಗಳನ್ನು ರಕ್ಷಿಸುವವನೇ ನಿಜವಾದ ದೇವರು. ನಮ್ಮಳಗೆ ಮಾನವನೂ ಇದ್ದಾನೆ, ದಾನವನೂ ಇದ್ದಾನೆ. ಮಾನವೀಯತೆಯ ನೆಲೆಯಲ್ಲಿ ಪ್ರೀತಿ, ತ್ಯಾಗ, ಸೋದರ ಭಾವನೆಯಿಂದ ಮುಂದುವರಿಯುತ್ತ ಇನ್ನೊಬ್ಬರ ಮಾನವ ಹಕ್ಕುಗಳನ್ನು ರಕ್ಷಿಸಿದಾಗ ಅವರ ಪಾಲಿಗೆ ನಾವು ದೇವರಾಗುತ್ತೇವೆ ಎಂದವರು ವ್ಯಾಖ್ಯಾನಿಸಿದರು.

ಅಪರಾಧ, ಅವಘಡಗಳು ಎಲ್ಲೇ ಕಂಡುಬರಲಿ, ಅದನ್ನು ಪ್ರತ್ಯಕ್ಷ ನೋಡಿಯೂ ನಿರ್ಲಕ್ಷಿಸಿದರೆ ಅದು ಕೂಡ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಕೂಡಲೆ ದೂರು ನೀಡಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಜವಾಬ್ದಾರಿ ನಿರ್ವಹಿಸಬೇಕು ಎಂದ ಅವರು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ ಮಾತನಾಡಿ, ಮನುಷ್ಯರು ಸ್ವಾರ್ಥಿಗಳಾಗುತ್ತಿರುವುದರಿಂದಲೇ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳೂ ಹೆಚ್ಚುತ್ತಿವೆ. ಜಾತಿ, ಧರ್ಮ, ಭೇದ ಭಾವಗಳನ್ನು ಬದಿಗಿಟ್ಟು ಇನ್ನೊಬ್ಬ ವ್ಯಕ್ತಿಯ ಹಕ್ಕನ್ನು ಗೌರವಿಸಬೇಕು. ಇದು ಕೇವಲ ಸರ್ಕಾರ ಅಥವಾ ಸಂಘ ಸಂಸ್ಥೆಗಳಿಂದ ಸಾಧ್ಯವಿಲ್ಲ. ಎಲ್ಲರೂ ಈ ಸಹಬಾಳ್ವೆಯ ಕೆಲಸಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಮಂಗಳೂರು ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ಮಾನವ ಹಕ್ಕುಗಳ ಹೋರಾಟಗಾರ ಕೆ.ಬಾಲಕೃಷ್ಣ ರೈ, ಕಾಲೇಜು ಪ್ರಾಂಶುಪಾಲೆ ಅರುಣಾ ಪಿ. ಕಾಮ್, ಕುಮಾರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News