ಕೋಡಿಬೆಂಗ್ರೆ ಬೀಚ್‌ನಲ್ಲಿ ಗುಂಡು ಹಾರಾಟ ನಡೆದಿಲ್ಲ: ಎಸ್ಸೈ ಮಧು ಸ್ಪಷ್ಟನೆ

Update: 2017-12-13 16:22 GMT

ಮಲ್ಪೆ, ಡಿ.13: ಇಲ್ಲಿಗೆ ಸಮೀಪದ ಕೋಡಿಬೆಂಗ್ರೆಯ ಡೆಲ್ಟಾ ಬೀಚ್‌ನಲ್ಲಿ ಇಂದು ಸಂಜೆ ಹುಟ್ಟುಹಬ್ಬದ ಸಂಭ್ರಮವನ್ನಾಚರಿಸಲು ಆಗಮಿಸಿದ ಭಿನ್ನ ಕೋಮಿನ ಮೂವರು ಯುವಕರು ಹಾಗೂ ಮೂವರು ಯುವತಿಯರು ಸ್ಥಳೀಯರ ಕಂಗೆಣ್ಣಿಗೆ ಗುರಿಯಾಗಿ ಹಲ್ಲೆಗೊಳಗಾದರೂ, ಸಕಾಲದಲ್ಲಿ ಆಗಮಿಸಿದ ಮಲ್ಪೆ ಪೊಲೀಸರು ಅವರನ್ನು ರಕ್ಷಿಸಿ ಠಾಣೆಗೆ ಕರೆದೊಯ್ದ ಘಟನೆ ನಡೆದಿದೆ.

ಶೃಂಗೇರಿಯ ಒಬ್ಬ ಹಾಗೂ ಸುಭಾಷ್‌ನಗರದ ಇಬ್ಬರು ಯುವಕರು ಒಂದು ಕೋಮಿಗೆ ಸೇರಿದ್ದರೆ, ಶೃಂಗೇರಿ, ಶಿರ್ವ ಹಾಗೂ ಬೆಳ್ಮಣ್‌ನ ಮೂವರು ಯುವತಿಯರು ಮೂರು ವಿಭಿನ್ನ ಕೋಮಿಗೆ ಸೇರಿದ್ದರು. ಇವರು ಇಂದು ಅಪರಾಹ್ನ ಕೋಡಿಬೆಂಗ್ರೆ ಬೀಚ್‌ಗೆ ಹುಟ್ಟುಹಬ್ಬದ ಪ್ರಯುಕ್ತ ಆಗಮಿಸಿದ್ದರು. ಇದನ್ನು ಅನುಚಿತ ವರ್ತನೆ ಎಂದು ಆರೋಪಿಸಿದ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಇವರ ಮೇಲೆ ಹಲ್ಲೆ ನಡೆಸಿದರು ಎಂದು ಹೇಳಲಾಗಿದೆ. ಮಲ್ಪೆ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿದರೂ, ಯುವತಿಯ ಹೆತ್ತವರು ಬರುವವರೆಗೆ ಇವರನ್ನು ಬಿಡುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು.

ಹುಡುಗಿಯ ತಂದೆ ಬಂದು ತನ್ನ ಮಗಳನ್ನು ಕರೆದೊಯ್ದ ಬಳಿಕ ಗುಂಪು ಚದುರಿದ್ದು, ಉಳಿದವರನ್ನು ಪೊಲೀಸರು ಠಾಣೆಗೆ ಕರೆತಂದು ಅವರ ಪೋಷಕರು ಬಂದ ಬಳಿಕ ಎಲ್ಲರಿಂದಲೂ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದರು.

ಘಟನೆಯ ಕುರಿತಂತೆ ಯಾರೂ ಸಹ ದೂರು ನೀಡಿರದ ಕಾರಣ ಯಾವುದೇ ಕೇಸು ದಾಖಲಾಗಿಲ್ಲ ಎಂದು ಮಲ್ಪೆ ಠಾಣೆ ಎಸ್ಸೈ ಮಧು ತಿಳಿಸಿದ್ದಾರೆ. ಯುವತಿಯರನ್ನು ಹೆತ್ತವರೊಂದಿಗೆ ಕುಳಿಹಿಸಿದ್ದು, ಮೂವರು ಯುವಕರಿಂದ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಲಾಗಿದೆ ಎಂದವರು ತಿಳಿಸಿದರು.

ಕೋಡಿಬೆಂಗ್ರೆ ಬೀಚ್‌ನಲ್ಲಿ ಸೇರಿದ ಗುಂಪನ್ನು ಚದುರಿಸಲು ತಾವು ಗಾಳಿಯಲ್ಲಿ ಗುಂಡು ಹಾರಿಸಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸಂಪೂರ್ಣ ಸುಳ್ಳು. ತಾವು ಯಾವುದೇ ಗುಂಡು ಹಾರಿಸಿಲ್ಲ ಎಂದೂ ಎಸ್ಸೈ ಮಧು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News