ಉಡುಪಿ: ಬೆಲೆ ಏರಿಕೆ ವಿರುದ್ಧ ಸಿಐಟಿಯು ಪ್ರತಿಭಟನೆ

Update: 2017-12-13 16:36 GMT

ಉಡುಪಿ, ಡಿ.13: ನಿರಂತರವಾಗಿ ಏರುತ್ತಿರುವ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಲು ವಿಫಲವಾಗಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಉಡುಪಿ ತಾಲೂಕು ಸಮಿತಿ ಇಂದು ಸಂಜೆ ನಗರದ ಕೇಂದ್ರ ಅಂಚೆಕಚೇರಿ ಎದುರು ಪ್ರತಿಭಟನೆ ನಡೆಸಿತು.

ಕೇಂದ್ರದ ಬಿಜೆಪಿ ಸರಕಾರ ಮೋಸದಾಟದ ಮೂಲಕ ಬೆಲೆಗಳು ಇಳಿಕೆಯಾಗಿದೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಆದರೆ ವಾಸ್ತವದಲ್ಲಿ ಎಲ್ಲಾ ಅಗತ್ಯ ವಸ್ತುಗಳಾದ ಆಹಾರಧಾನ್ಯ, ತರಕಾರಿ, ಸಾರಿಗೆ, ಆರೋಗ್ಯ ಸೇವೆ, ಶಿಕ್ಷಣ ಇತ್ಯಾದಿಗಳ ಬೆಲೆಗಳನ್ನು ನಿರಂತರವಾಗಿ ಏರಿಸಲಾದಗುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನೀತಿಗಳು ಹಾಗೂ ಆಡಳಿತ ವೈಫಲ್ಯತೆ ಈ ಬೆಲೆಯೇರಿಕೆಗೆ ಕಾರಣವಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಕಾರ್ಮಿಕ ಮುಖಂಡ ವಿಠಲ ಪೂಜಾರಿ ಮಾತನಾಡಿ, ಜಿಎಸ್‌ಟಿಯನ್ನು ಜನರ ಮೇಲೆ ಬಲವಂತವಾಗಿ ಹೇರುವ ಮೂಲಕ ಎಲ್ಲಾ ವಸ್ತುಗಳ ಬೆಲೆಗಳೂ ಏರುವಂತೆ ಮಾಡಲಾಗಿದೆ. ಇದನ್ನು ವಿರೋಧಿಸಲು ಜನಸಾಮಾನ್ಯರು ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕೇವಲ ಪ್ರಬಲ ಹೋರಾಟವೊಂದೇ ನಮ್ಮನ್ನು ಈ ಸ್ಥಿತಿಯಿಂದ ಮೇಲಕ್ಕೆತ್ತಬಹುದು ಎಂದರು.

ಸಿಐಟಿಯು ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮೂರೂವರೆ ವರ್ಷಗಳ ಹಿಂದೆ ಆಡಳಿತಕ್ಕೆ ಬಂದ ಮೋದಿ ಸರಕಾರ ತಾವು ನೀಡಿದ ಯಾವುದೇ ಒಂದು ವಾಗ್ದಾನವನ್ನು ಈಡೇರಿಸಿಲ್ಲ. ಕಪ್ಪುಹಣವನ್ನು ತರುವ ಘೋಷಣೆ ಟೊಳ್ಳಾಗಿದ್ದು, 9000 ಕೋಟಿ ರೂ.ಗಳನ್ನು ಬ್ಯಾಂಕುಗಳಿಗೆ ಪಂಗನಾಮ ಹಾಕಿದ ವಿಜಯ ಮಲ್ಯ ಹಾಗೂ ಲಲಿತ್ ಮೋದಿ ಅವರನ್ನು ವಿದೇಶಕ್ಕೆ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಪ್ರತಿ ವರ್ಷ ಎರಡು ಕೋಟಿ ಮಂದಿಗೆ ಉದ್ಯೋಗ ನೀಡುವ ಬದಲು ಇರುವ ಉದ್ಯೋಗಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇಂದು ಸಾರ್ವಜನಿಕ ಪಡಿತರ ವ್ಯವಸ್ಥೆ ಕುಸಿದು ಬಿದ್ದಿದೆ. ರೈತರಿಗೆ ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆಗಳು ಸಿಗುತ್ತಿಲ್ಲ. ಸರಕಾರ ಕನಿಷ್ಠ ವೇತನವನ್ನು, ಕಲ್ಯಾಣ ಕಾರ್ಯಕ್ರಮಗಳ ವೆಚ್ಚವನ್ನು ಕಡಿತ ಮಾಡುವ ಮೂಲಕ ಬಡಜನರ ಸಂಕಷ್ಟಗಳನ್ನು ಹೆಚ್ಚಿಸಲಾಗುತ್ತಿದೆ ಎಂದವರು ದೂರಿದರು.

ಪ್ರತಿಭಟನೆಯ ವೇಳೆ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಕವಿರಾಜ್, ನಳಿನಿ, ಶೇಖರ ಬಂಗೇರ, ವಾಮನ ಪೂಜಾರಿ, ಗಣೇಶ್ ನಾಯ್ಕ, ಲಕ್ಷ್ಮಣ, ಸದಾಶಿವ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News