ಕಿಂಡಿ ಅಣೆಕಟ್ಟುಗಳಿಗೆ 20 ಕೋಟಿ ರೂ. ವೆಚ್ಚ: ಪ್ರಮೋದ್

Update: 2017-12-13 16:41 GMT

ಉಡುಪಿ, ಡಿ.13: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ತಮ್ಮ ಅವಧಿಯಲ್ಲಿ 20 ಕೋಟಿ ರೂ. ಗಳಿಗೂ ಅಧಿಕ ಅನುದಾನವನ್ನು ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಬುಧವಾರ ಬ್ರಹ್ಮಾವರ ಸಮೀಪದ ಚಾಂತಾರು ಅಂಗಡಿಬೆಟ್ಟುನಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ಉದ್ಘಾಟನೆ ಮತ್ತು ನೀಲಾವರ- ಕೆಳಕುಂಜಾಲು ಉಳ್ಳೂರು ಮನೆ ಬಳಿ ಕಿಂಡಿ ಅಣೆಕಟ್ಟು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿದ್ದರು.

ಕೃಷಿಗೆ ಅಗತ್ಯ ನೀರು ಒದಗಿಸಲು ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ದೃಷ್ಠಿಯಿಂದ ಕ್ಷೇತ್ರದಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲ ಗಳಾಗಿವೆ. ನೀರಿನ ಅಂರ್ತಜಲ ಮಟ್ಟ ಏರಿಕೆಯಾಗಿದೆ. ಅಲ್ಲದೆ ಕುಡಿಯುವ ಹಾಗೂ ಕೃಷಿಗೆ ಬಳಸುವ ನೀರಿಗೆ ಉಪ್ಪುನೀರು ಬೆರೆಯುವ ಪ್ರಮಾಣ ಕಡಿಮೆ ಯಾಗಿದೆ ಎಂದರು.

ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಬಗ್ಗೆ, ಹಲಗೆಗಳ ಗುಣಮಟ್ಟ ಹಾಗೂ ನೀರು ಸೋರಿ ಹೋಗುವ ಬಗ್ಗೆ ಕೆಲವು ಕಡೆ ಸಾರ್ವಜನಿಕರಿಂದ ದೂರುಗಳನ್ನು ಬಂದಿದ್ದು, ಅಂತಹ ಕಿಂಡಿ ಅಣೆಕಟ್ಟುಗಳನ್ನು ಕೂಡಲೇ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ ಸಚಿವರು, ಯಾವುದೇ ಕಾರಣಕ್ಕೂ ಕಾಮಗಾರಿಗಳ ಗುಣಮಟ್ಟದಲ್ಲಿ ವ್ಯತ್ಯಾಸವಾಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸುವಂತೆ ಎಚ್ಚರಿಕೆ ನೀಡಿದರು.

 ಇಂದು ಒಟ್ಟು 4.25 ಕೋಟಿ ರೂ. ವೆಚ್ಚದ 15 ವಿವಿಧ ಕಿಂಡಿ ಅಣೆಕಟ್ಟು ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಚಾಂತಾರು ಗ್ರಾಪಂಅಧ್ಯಕ್ಷೆ ಸರಸ್ವತಿ ನಾಯಕ್, ನೀಲಾವರ ಗ್ರಾಪಂ ಅದ್ಯಕ್ಷೆ ಆಶಾ ಕೋಟ್ಯಾನ್, ಉಪಾಧ್ಯಕ್ಷ ರಮೇಶ್ ಪೂಜಾರಿ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಪಾಲಣ್ಣ ಮತಿತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News