ನಿರ್ಭಯಾ ಹೆತ್ತವರಿಗೆ ಲಂಚ ನೀಡಲಾಗಿದೆ ಎಂದ ವಕೀಲನ ಬಾಯಿ ಮುಚ್ಚಿಸಿದ ನ್ಯಾಯಾಲಯ

Update: 2017-12-13 17:07 GMT

ಹೊಸದಿಲ್ಲಿ, ಡಿ.13: ನಿರ್ಭಯಾ ತಂದೆ, ತಾಯಿಗೆ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ಲಂಚ ನೀಡಿದೆ ಎಂದು ಆರೋಪಿಸಿದ ವಕೀಲರ ಬಾಯನ್ನು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮುಚ್ಚಿಸಿದ ಘಟನೆ ಬುಧವಾರ ನಡೆದಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.

ದೇಶವನ್ನೇ ತಲ್ಲಣಗೊಳಿಸಿದ್ದ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆ ಎದುರಿಸುತ್ತಿರುವ ಅಪರಾಧಿಗಳಲ್ಲಿ ಒಬ್ಬನಾದ ಮುಖೇಶ್ ಪರ ವಕೀಲ ಎಂಎಲ್ ಶರ್ಮಾ ಈ ರೀತಿಯ ಆರೋಪ ಮಾಡಿದ್ದು ಈ ಬಗ್ಗೆ ಆಕ್ಷೇಪವೆತ್ತಿದ ಮುಖ್ಯ ನ್ಯಾಯಾಧೀಶರು, ನಿಮ್ಮ ಬಾಯಿಮುಚ್ಚಿ, ಇಂಥಾ ಹೇಳಿಕೆಗಳನ್ನು ನೀವು ಹೇಗೆ ನೀಡಲು ಸಾಧ್ಯ? ನಿಮ್ಮ ವಾದವಾದರೂ ಏನು? ಎಂದು ಪ್ರಶ್ನಿಸಿದರು. ಡಿಎನ್‌ಎ ಮತ್ತು ಮೃತಳ ಸಾಯುವ ವೇಳೆಯ ಹೇಳಿಕೆಯ ನಮ್ಮ ವಿಶ್ಲೇಷಣೆ ತಪ್ಪಾಗಿದೆ, ತನಿಖೆ ಸರಿಯಾಗಿ ನಡೆದಿಲ್ಲ ಎಂಬುದನ್ನು ಸಾಬೀತುಪಡಿಸಿ ಎಂದು ಮುಖ್ಯ ನ್ಯಾಯಾಧೀಶರು ವಕೀಲರಿಗೆ ಸವಾಲು ಹಾಕಿದರು.

ನಿರ್ಭಯಾರ ತಂದೆತಾಯಿಗೆ ದ್ವಾರ್ಕಾದಲ್ಲಿ ನೀಡಲಾಗಿರುವ ಡಿಡಿಎ ಫ್ಲಾಟ್ ಮತ್ತು ರೂ. 20 ಲಕ್ಷ ಸಾಕ್ಷಿದಾರರಿಗೆ ಸರಕಾರ ನೀಡಿದ ಲಂಚವಾಗಿದೆ ಎಂದು ಶರ್ಮಾ ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರ್ಭಯಾರ ತಂದೆ ಬದ್ರಿನಾಥ್ ಸಿಂಗ್, ಶರ್ಮಾರ ಹೇಳಿಕೆ ಅತಿರೇಕದಿಂದ ಕೂಡಿದೆ ಎಂದು ಹೇಳಿದ್ದಾರೆ ಎಂದು ಪತ್ರಿಕೆಯಲ್ಲಿ ತಿಳಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯವು ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಜನವರಿಗೆ ಮುಂದೂಡಿದೆ.

ವಕೀಲರಾದ ಎಂಎಲ್ ಶರ್ಮಾ ನಿರ್ಭಯಾ ಪ್ರಕರಣದಲ್ಲಿ ಈ ಹಿಂದೆಯೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. 2016ರಲ್ಲಿ ತಮ್ಮ ವಾದ ಮಂಡಿಸುವ ವೇಳೆ ಶರ್ಮಾ, ಈ ಇಡೀ ಪ್ರಕರಣದ ಯೋಜನೆಯನ್ನು 2012ರ ಡಿಸೆಂಬರ್ 16ರ ರಾತ್ರಿ ರಾಜಕಾರಣಿಯೊಬ್ಬರು ಸಂತ್ರಸ್ತೆಯ ಗೆಳೆಯನ ಜೊತೆಗೂಡಿ ಕೇವಲ ರಾಜಕೀಯ ಲಾಭ ಪಡೆಯುವ ಸಲುವಾಗಿ ರಚಿಸಿದ್ದರು ಎಂದು ಹೇಳಿದ್ದರು. ಸಂತ್ರಸ್ತೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಲಾಗಿದೆ ಎಂಬುದನ್ನು ಸಾಬೀತುಪಡಿಸುವವರಿಗೆ ರೂ. ಹತ್ತು ಲಕ್ಷ ಬಹುಮಾನ ನೀಡುವುದಾಗಿಯೂ ಅವರು ಸವಾಲು ಹಾಕಿದ್ದರು. ಸರ್ವೋಚ್ಛ ನ್ಯಾಯಾಲಯವು ಮೇಯಲ್ಲಿ ನೀಡಿದ ತೀರ್ಪಿನಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಹತ್ಯಾ ಪ್ರಕರಣದಲ್ಲಿ ತಪ್ಪಿತಸ್ಥರಾದ ಅಕ್ಷಯ್, ಪವನ್, ವಿನಯ್ ಶರ್ಮಾ ಮತ್ತು ಮುಖೇಶ್‌ಗೆ ಮರಣ ದಂಡನೆ ವಿಧಿಸಿ ಆದೇಶ ನೀಡಿತ್ತು. ಇವರಲ್ಲಿ ಮುಖೇಶ್ ತನ್ನ ಮರಣ ದಂಡನೆ ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದ.

2012ರ ಡಿಸೆಂಬರ್ 16ರಂದು ದಿಲ್ಲಿಯಲ್ಲಿ ನಡೆದ ಈ ಘಟನೆಯಲ್ಲಿ ಆರು ಜನರು 23ರ ಹರೆಯದ ಫಿಸಿಯೋಥೆರಪಿ ವಿದ್ಯಾರ್ಥಿನಿಯ ಮೇಲೆ ಚಲಿಸುವ ಬಸ್‌ನಲ್ಲಿ ಅತ್ಯಾಚಾರ ನಡೆಸಿದ್ದರು. ದೈಹಿಕವಾಗಿ ತೀವ್ರ ಹಲ್ಲೆಗೊಳಗಾಗಿದ್ದ ಸಂತ್ರಸ್ತೆ 2012ರ ಡಿಸೆಂಬರ್ 29ರಂದು ಸಿಂಗಾಪೂರ್‌ನ ಆಸ್ಪತ್ರೆಯಲ್ಲಿ ಅಸುನೀಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News