ಅಪಘಾತದ ಗಾಯಾಳುವಿನ ಮೆದುಳು ನಿಷ್ಕ್ರಿಯ: ಅಂಗಾಂಗ ದಾನ

Update: 2017-12-14 13:55 GMT

ಉಡುಪಿ, ಡಿ.14: ಕೋಟ ಹೈಸ್ಕೂಲ್ ಸಮೀಪ ಡಿ.12ರ ಅಪರಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾರಕೂರು ಬೆಣ್ಣೆಕುದ್ರುವಿನ ಕಸ್ತೂರಿ ಪೂಜಾರಿ (36) ಅವರ ಮೆದುಳು ನಿಷ್ಕ್ರಿಯಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬಸ್ಥರ ಒಪ್ಪಿಗೆಯಂತೆ ಇಂದು ಅವರ ಅಂಗಾಂಗಗಳನ್ನು ದಾನವಾಗಿ ನೀಡಲಾಗಿದೆ. ಇದರಿಂದ ಒಟ್ಟು ಆರು ಮಂದಿ ರೋಗಿಗಳಿಗೆ ಅನುಕೂಲವಾಗಿ ಜೀವದಾನ ಸಿಕ್ಕಂತಾಗಿದೆ.

ಅಪಘಾತದಿಂದಾಗಿ ಕಸ್ತೂರಿ ಅವರ ತಲೆಗೆ ತೀವ್ರವಾದ ಗಾಯವಾಗಿದ್ದು, ಇದರೊಂದಿಗೆ ಸೊಂಟ ಮುರಿತ ಹಾಗೂ ಬಲತೊಡೆ ಮುರಿತವನ್ನು ಹೊಂದಿದ್ದರು. ಮಂಗಳವಾರವೇ ಕೆಎಂಸಿಗೆ ದಾಖಲಾಗಿದ್ದ ಅವರು ಚಿಕಿತ್ಸೆ ಯಿಂದ ಚೇತರಿಸಿಕೊಂಡಿರಲಿಲ್ಲ. ಮರುದಿನ ಡಿ.13ರಂದು ಸಂಜೆ ಆರು ಗಂಟೆಗೆ ಕಸ್ತೂರಿಯ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರ ಅಧಿಕೃತ ಸಮಿತಿ ಘೋಷಿಸಿದ್ದು, ಕಸ್ತೂರಿ ಪೂಜಾರಿಯವರ ಸಹೋದರರಾದ ಶೈಲೇಶ್ ಹಾಗೂ ಪ್ರತಾಪ್ ಅಲ್ಲದೇ ಕುಟುಂಬದ ಸದಸ್ಯರು ಆಕೆಯ ಕಾರ್ಯ ಸಾಧ್ಯವಾದ ಅಂಗಗಳನ್ನು ದಾನ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಅದರಂತೆ ಕಸ್ತೂರಿ ಅವರ ಎರಡು ಮೂತ್ರಪಿಂಡಗಳು (ಕಿಡ್ನಿ), ಯಕೃತ್ (ಲಿವರ್), ಎರಡು ಕಾರ್ನಿಯಾ (ಕಣ್ಣಿನ ಭಾಗ) ಹಾಗೂ ಹೃದಯ ಕವಾಟ ಅಗತ್ಯವುಳ್ಳ ರೋಗಿಗಳ ಬುಕನ್ನು ಉಳಿಸಲು ಸಹಾಯ ಮಾಡಿತು.

ವೈದ್ಯರ ಅಧಿಕೃತ ಸಮಿತಿಯು 1994ರ ಮಾನವ ಅಂಗ ಕಾಯಿದೆ ನಿಯಮಾವಳಿ (ಪ್ರೋಟೋಕಾಲ್) ಮತ್ತು ಕಾರ್ಯ ವಿಧಾನಗಳ ಪ್ರಕಾರ ಕಸ್ತೂರಿ ಮೆದುಳಿನ ಮರಣ ಹೊಂದಿದ ರೋಗಿ ಎಂದು ಡಿ.13ರ ಸಂಜೆ 6ಗಂಟೆಗೆ ಮೊದಲ ಬಾರಿ ಘೋಷಿಸಿದರೆ, ಎರಡನೇ ಘೋಷಣೆಯನ್ನು ಇಂದು ಅಪರಾಹ್ನ 12 ಗಂಟೆಗೆ ಮಾಡಿತು. ಆ ಬಳಿಕ ಕಸ್ತೂರಿ ಅವರ ಕಾರ್ಯಸಾಧ್ಯ ಅಂಗಾಂಗಳ ದಾನಕ್ಕೆ ಒಪ್ಪಿಗೆ ನೀಡಲಾಯಿತು.

ಇದರಂತೆ ಒಂದು ಕಿಡ್ನಿಯನ್ನು ಮಂಗಳೂರಿನ ಫಾದರ್ ಮುಲ್ಲರ್‌ನ ಗುರುತಿಸಿದ ರೋಗಿಗೆ, ಇನ್ನೊಂದು ಕಿಡ್ನಿ ಮತ್ತು ಎರಡು ಕಾರ್ನಿಯಾಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಗುರುತಿಸಿದ ರೋಗಿಗಳಿಗೆ ನೀಡಲಾಯಿತು. ಅದೇ ರೀತಿ ಯಕೃತ್‌ನ್ನು ಮಂಗಳೂರಿನ ಎ.ಜೆ.ಆಸ್ಪತ್ರೆಯ ರೋಗಿಯೊಬ್ಬರಿಗೆ ನೀಡಲಾಗಿದೆ. ಕಸ್ತೂರಿಯವರ ಹೃದಯ ಕವಾಟ(ಹಾರ್ಟ್ ವಾಲ್ವ್)ವನ್ನು ಬೆಂಗಳೂರಿನ ನಾರಾಯಣ ಹೃದಯಾಲಯದ ರೋಗಿಗೆ ಕಳುಹಿಸಲಾಗಿದೆ.

ಕೊಯ್ಲು ಮಾಡಿದ ಅಂಗಗಳನ್ನು ಇಂದು ಅಪರಾಹ್ನ 12:45ರ ಸುಮಾರಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಮಂಗಳೂರಿನ ಫಾದರ್ ಮುಲ್ಲರ್ ಹಾಗೂ ಎ.ಜೆ.ಆಸ್ಪತ್ರೆಗೆ ಅಲ್ಲದೇ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಪೊಲೀಸ್ ಭದ್ರತೆಯ ಜೊತೆಗೆ ಎರಡು ಅಂಬ್ಯುಲೆನ್ಸ್‌ಗಳಲ್ಲಿ ರವಾನಿಸಲಾ ಯಿತು ಎಂದು ಕೆಎಂಸಿಯ ಡೆಪ್ಯುಟಿ ಮೆಡಿಕಲ್ ಸುಪರಿಡೆಂಟ್ ಡಾ.ಅವಿನಾಶ್ ಶೆಟ್ಟಿ ತಿಳಿಸಿದರು.

ಡಿ.12ರಂದು ಕೋಟ ವಿವೇಕ ಹೈಸ್ಕೂಲ್ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ಕಾರು - ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಬಾರಕೂರು ಬೆಣ್ಣೆಕುದ್ರು ನಿವಾಸಿ ಗಿರಿಜಾ(52) ಹಾಗೂ ಅವರ ಮಗ ಅವಿನಾಶ್(27) ಮೃತಪಟ್ಟಿದ್ದರು. ಇವರ ಸಂಬಂಧಿ ಕಾರು ಚಾಲಕ ಭಾಸ್ಕರ ಪೂಜಾರಿ ಮತ್ತು ಭಾಸ್ಕರ್ ಪತ್ನಿ ಕಸ್ತೂರಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಭಾಸ್ಕರ್ ಅವರ ಸ್ಥಿತಿಯೂ ಗಂಭೀರವಾಗಿದೆ.

ಹೊರದೇಶದಲ್ಲಿದ್ದ ಬೆಣ್ಣೆಕುದ್ರುವಿನ ಭಾಸ್ಕರ್ ಮೂರು ತಿಂಗಳ ಹಿಂದೆ ಊರಿಗೆ ಆಗಮಿಸಿದ್ದು, ಇಲ್ಲಿಯೇ ನೆಲೆಸಲು ನಿರ್ಧರಿಸಿದ್ದರು. ಇವರಿಗೆ ಇಬ್ಬರು ಪುತ್ರರು. ಓರ್ವ ನಾಲ್ಕನೆ, ಇನ್ನೋರ್ವ ಎರಡನೆ ತರಗತಿಯ ವಿದ್ಯಾರ್ಥಿ. ಕಸ್ತೂರಿ ಮೂಲತಃ ಕುಂದಾಪುರದವರು. ಇವರಿಗೆ ಇಬ್ಬರು ಸಹೋದರರು ಮತ್ತು ಓರ್ವ ಹೋದರಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News