×
Ad

ಪ್ರಾಮಾಣಿಕತೆ ಇದ್ದಲ್ಲಿ ಬ್ಯಾಂಕ್ ಬೆಳೆಯಲು ಸಾಧ್ಯ: ಸಚಿವ ಪ್ರಮೋದ್

Update: 2017-12-14 21:00 IST

ಉಡುಪಿ, ಡಿ.14: ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸಾಲ ಪಡೆದ ಸಾಲಗಾರರು ಪ್ರಾಮಾಣಿಕರಾಗಿದ್ದಲ್ಲಿ ಬ್ಯಾಂಕ್ ಬೆಳೆಯಲು ಸಾಧ್ಯ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಗುರುವಾರ ನಡೆದ ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಶತಮಾ ನೋತ್ಸವ ಸಂಭ್ರಮಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತ ನಾಡುತಿದ್ದರು.

ಬಡಗಬೆಟ್ಟು ಸೊಸೈಟಿ ಸಹಿತ ಅನೇಕ ಬ್ಯಾಂಕ್‌ಗಳು ಸೇವೆ ಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿವೆ. ಜನರಿಗೆ ಸುಲಭದಲ್ಲಿ ಸಾಲ ಸಿಗುವ ವ್ಯವಸ್ಥೆ ಸಹಕಾರಿ ಬ್ಯಾಂಕ್‌ಗಳಲ್ಲಿ ಇದೆ ಎಂದು ಅವರು ತಿಳಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಕಾಣಿಯೂರು ಮಠಾಧೀಶ ಶ್ರೀವಿದ್ಯಾ ವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ಇಂದು ಪರಸ್ಪರ ಬೇಧಭಾವ ಮತ್ತು ಅಸಹಕಾರಗಳು ಬೆಳೆಯುತ್ತಿವೆ. ಜನರಿಗೆ ಒಳಿತು ಮಾಡುವ ಸಂಸ್ಥೆಯನ್ನು ಜನ ಅಪೇಕ್ಷಿಸುತ್ತಾರೆ ಮತ್ತು ಗುರುತಿಸುತ್ತಾರೆ. ಸಂಘವನ್ನು ಹುಟ್ಟುಹಾಕುವುದು ಸುಲಭ. ಆದರೆ ಅದನ್ನು ಸರಿಯಾಗಿ ಮುಂದುವರೆಸಿಕೊಂಡು ಹೋಗುವುದು ಸವಾಲಿನ ಕೆಲಸ ಎಂದರು.

ಉಡುಪಿ ಶೋಕಮಾತ ಇಗರ್ಜಿಯ ಧರ್ಮಗುರು ರೆ.ಫಾ.ವಲೇರಿಯನ್ ಮೆಂಡೋನ್ಸ, ಉಡುಪಿ ಅಂಜುಮಾನ್ ಮಸೀದಿಯ ಧರ್ಮಗುರು ಮೌಲಾನ ಮುಹಮ್ಮದ್ ಇನಾಯತುಲ್ಲಾ ರಝ್ವಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ವಹಿಸಿದ್ದರು.

ಈ ಸಂದರ್ಭದಲ್ಲಿ ಶತಮಾನೋತ್ಸವದ ವಿಶೇಷ ಪತ್ರಿಕೆ ‘ಶತಾಮೃತ’ ಹಾಗೂ ಲೋಗೊ ಬಿಡುಗಡೆ, ಸಂಘದ ಪ್ರಾಯೋಜಕತ್ವದಲ್ಲಿ ಸದಸ್ಯರಿಗೆ ನೀಡುವ ಲಂಬಾರ್ಡ್ ಆರೋಗ್ಯ ಕಾರ್ಡ್ ಬಿಡುಗಡೆ, ಅಂಚೆ ಚೀಟಿ ಬಿಡುಗಡೆ, ಸಂಘದ ಮಾಜಿ ಆಡಳಿತಾಧಿಕಾರಿ ಆರ್.ಎಸ್.ಶೆಟ್ಟಿ ಅವರಿಗೆ ಸನ್ಮಾನವನ್ನು ನೆರವೇರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ನ್ಯಾಶನಲ್ ಕೋ ಆಪರೇಟಿವ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಪ್ರಾದೇಶಿಕ ಕಚೇರಿಯ ಮುಖ್ಯ ನಿರ್ದೇಶಕ ಡಾ.ಕೆ.ಟಿ.ಚನ್ನೇಶಪ್ಪ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಚಂದ್ರ ಪ್ರತಿಮಾ ಮುಖ್ಯ ಅತಿಥಿಗಳಾಗಿದ್ದರು.

ಶತಮಾನೋತ್ಸವ ಸಮಿತಿಯ ಸಂಚಾಲಕ ಪುರುಷೋತ್ತಮ ಶೆಟ್ಟಿ, ಸಂಘದ ಉಪಾಧ್ಯಕ್ಷ ಎಲ್. ಉಮಾನಾಥ್, ಲಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಉಪಸ್ಥಿತರಿದ್ದರು.

ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್ ಸ್ವಾಗತಿಸಿದರು. ಪ್ರಧಾನ ವ್ಯವ ಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಖಾ ವ್ಯವಸ್ಥಾಪಕ ಪ್ರವೀಣ್ ಕುಮಾರ್ ವಂದಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಯಕ್ಷ ನಾಟ್ಯ ವೈಭವ ‘ರಾಧಾ ವಿಲಾಸ’ ಮತ್ತು ಸಭಾ ಕಾರ್ಯಕ್ರಮದ ಬಳಿಕ ಯಕ್ಷಗಾನ ವೈಭವ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News