×
Ad

2016ರಲ್ಲಿ ಭಾರತದಲ್ಲಿ ಸೃಷ್ಟಿಯಾದ ಇ-ತ್ಯಾಜ್ಯ ಎಷ್ಟು ಟನ್ ಗಳು ಗೊತ್ತಾ?

Update: 2017-12-14 21:11 IST

ಹೊಸದಿಲ್ಲಿ, ಡಿ.14: ಜಗತ್ತು 2016ರಲ್ಲಿ 44.7 ಮಿಲಿಯನ್ ಟನ್ ಇ-ತ್ಯಾಜ್ಯವನ್ನು ಸೃಷ್ಟಿಸಿದ್ದು ಇದರಿಂದ  ಗಿಝಾದ 9 ಗ್ರೇಟ್ ಪಿರಮಿಡ್‌ಗಳನ್ನು ನಿರ್ಮಿಸಬಹುದಾಗಿದೆ ಎಂದು ಈ ವಾರ ಬಿಡುಗಡೆಯಾದ ಸಂಯುಕ್ತ ರಾಷ್ಟ್ರಗಳ ವರದಿಯಲ್ಲಿ ತಿಳಿಸಲಾಗಿದೆ.

ಈ ಪೈಕಿ ವಿದ್ಯುನ್ಮಾನ ಕೈಗಾರಿಕಾ ಕ್ಷೇತ್ರದಲ್ಲಿ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತದ ಪಾಲು ಎರಡು ಮಿಲಿಯನ್ ಇ-ತ್ಯಾಜ್ಯವಾಗಿದ್ದು, ಇದರೊಂದಿಗೆ ವಿದ್ಯುನ್ಮಾನ ಆಮದು ಕೂಡಾ ಇ-ತ್ಯಾಜ್ಯಕ್ಕೆ ಕಾಣಿಕೆ ನೀಡುತ್ತಿದೆ ಎಂದು ವರದಿ ತಿಳಿಸುತ್ತದೆ.

ಈ ಇ-ತ್ಯಾಜ್ಯಗಳ ಅಸಮರ್ಪಕ ವಿಲೇವಾರಿಯಿಂದ ಸೀಸ, ಕ್ಯಾಡ್ಮಿಯಂ, ಕ್ರೋಮಿಯಂಗಳನ್ನು ದಹಿಸುವುದರಿಂದ ಸೃಷ್ಟಿಯಾಗುವ ವಿಷಕಾರಿ ಅನಿಲಗಳು ಉಸಿರಿನ ಮೂಲಕ ಅಥವಾ ವಾತಾವರಣದಲ್ಲಿ ಸೇರುವ ಮೂಲಕ ಮಾರಣಾಂತಿಕವಾಗಿ ಪರಿಣಮಿಸುತ್ತವೆ.

2018ರಲ್ಲಿ ಭಾರತದ ಇ-ತ್ಯಾಜ್ಯ ಶೇಖರಣೆಯು ಮೂರು ಮಿಲಿಯನ್ ತಲುಪಲಿದೆ. ಅಸೊಚಾಮ್-ಕೆಪಿಎಂಜಿ ವಿಶ್ಲೇಷಣೆಯ ಪ್ರಕಾರ ಶೇಕಡಾ 70 ಇ-ತ್ಯಾಜ್ಯವನ್ನು ಕೈಗಾರಿಕೆಗಳು ಸೃಷ್ಟಿಸುತ್ತಿದ್ದರೆ 15% ಗೃಹೋತ್ಪನ್ನಗಳ ಮೂಲಕ ಉಂಟಾಗುತ್ತಿದೆ. ಇನ್ನು ಮೊಬೈಲ್ ಮತ್ತು ದೂರಸಂಪರ್ಕ ಸಾಧನಗಳಿಂದ ಭಾರತದಲ್ಲಿ ಶೇಕಡಾ 12 ಇ-ತ್ಯಾಜ್ಯ ಉತ್ಪಾದನೆಯಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 ಭಾರತದಲ್ಲಿ 2016ರಲ್ಲಿ ಇ-ತ್ಯಾಜ್ಯ ನಿರ್ವಹಣಾ ಕಾನೂನನ್ನು ಜಾರಿಗೆ ತರಲಾಗಿದ್ದು ಇದೇ ಮೊದಲ ಬಾರಿಗೆ ಉತ್ಪಾದಕರ ಜವಾಬ್ದಾರಿಯನ್ನು ಹೆಚ್ಚಿಸಲಾಗಿದೆ. ಈ ಕಾನೂನಿನ ಮೂಲಕ ಜೀವನಾಂಶ ಕೊನೆಗೊಂಡಿರುವ ವಿದ್ಯುನ್ಮಾನ ಉತ್ಪಾದನೆಗಳನ್ನು ಸಂಗ್ರಹಿಸುವ ಮತ್ತು ವಿಲೇವಾರಿ ಮಾಡುವ ಸಂಪೂರ್ಣ ಜವಾಬ್ದಾರಿ ಉತ್ಪಾದಕರ ಮೇಲಿರುತ್ತದೆ. ಈ ವರದಿಯನ್ನು ಸಂಯುಕ್ತ ರಾಷ್ಟ್ರ ವಿಶ್ವವಿದ್ಯಾಲಯವು ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ ಮತ್ತು ಅಂತಾರಾಷ್ಟ್ರೀಯ ಘನ ತ್ಯಾಜ್ಯ ಸಂಘಟನೆಯ ಸಹಕಾರದೊಂದಿಗೆ ಸಿದ್ಧಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News