ಪ್ರಧಾನಿಯ ಮುಳುಗುತ್ತಿರುವ ಹಡಗನ್ನು ರಕ್ಷಿಸಲು ಚುನಾವಣಾ ಆಯೋಗದ ಪ್ರಯತ್ನ; ಕಾಂಗ್ರೆಸ್ ಆರೋಪ

Update: 2017-12-14 15:59 GMT

ಹೊಸದಿಲ್ಲಿ, ಡಿ.14: ಗುರುವಾರ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಗುಜರಾತ್‌ನಲ್ಲಿ ಮುಳುಗುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಹಡಗನ್ನು ಆಯೋಗವು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಇದೇ ವೇಳೆ ಗುಜರಾತ್‌ನಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿರುವ ಮಧ್ಯೆಯೇ ಮೋದಿ ಅಹ್ಮದಾಬಾದ್‌ನಲ್ಲಿ ರೋಡ್ ಶೋ ಆಯೋಜಿಸಿ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ದೂರು ನೀಡಿದೆ.

ಈ ಕುರಿತು ಮಾತನಾಡಿದ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ, ಚುನಾವಣಾ ಆಯೋಗವು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರತ್ಯೇಕ ನಿಯಮಗಳನ್ನು ರೂಪಿಸಿದಂತಿದೆ. ಆಯೋಗವು ಬಿಜೆಪಿಯ ಅಂಗಸಂಸ್ಥೆಯಂತೆ ವರ್ತಿಸಲು ಕಾರಣವಾದರೂ ಏನು ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ಮೋದಿ ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಕೈಗೊಂಬೆಗಳನ್ನಾಗಿ ಮಾಡಿಕೊಂಡಿರುವುದು ನಾಚಿಕೆಗೇಡು. ಚುನಾವಣಾ ಆಯೋಗವೂ ಅದರಲ್ಲಿ ಒಂದಾಗಿದೆ ಎಂದು ಸುಜ್ರೆವಾಲಾ ತಿಳಿಸಿದರು.

ಸದ್ಯ ಕಾಂಗ್ರೆಸ್‌ನ ವಾಗ್ದಾಳಿಗೆ ತುತ್ತಾಗಿರುವ ಮುಖ್ಯ ಚುನಾವಣಾ ಆಯುಕ್ತರಾದ ಅಚಲ್ ಕುಮಾರ್ ಜೋತಿ ಈ ಹಿಂದೆ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ವೇಳೆ ಗುಜರಾತ್‌ನ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಕೈಗಾರಿಕೆ, ಕಂದಾಯ ಮತ್ತು ಜಲ ಪೂರೈಕೆ ಇಲಾಖೆಗಳಲ್ಲೂ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದಾರೆ.

ಇದಕ್ಕೂ ಮುನ್ನ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾದ ರಾಹುಲ್ ಗಾಂಧಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವುದನ್ನು ಚುನಾವಣಾ ನೀತಿಸಂಹಿತೆಯ ಉಲ್ಲಂಘನೆ ಎಂದು ವ್ಯಾಖ್ಯಾನಿಸಿದ್ದ ಚುನಾವಣಾ ಆಯೋಗ ಈ ಬಗ್ಗೆ ರಾಹುಲ್ ಗಾಂಧಿಯವರಲ್ಲಿ ಸ್ಪಷ್ಟೀಕರಣವನ್ನು ಕೇಳಿತ್ತು. ಜೊತೆಗೆ ಈ ಸಂದರ್ಶನವನ್ನು ಪ್ರಸಾರ ಮಾಡಿದ ಟಿವಿ ಚಾನೆಲ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿತ್ತು.

ಗುರುವಾರದಂದು ಅಹ್ಮದಾಬಾದ್‌ನ ರನಿಪ್ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಶಾಯಿ ಗುರುತು ಹಾಕಿದ ತಮ್ಮ ಬೆರಳನ್ನು ಎತ್ತಿ ಜನರಿಗೆ ತೋರಿಸಿದ ಪ್ರಧಾನಿ ಮೋದಿ ನಂತರ ನಿಧಾನವಾಗಿ ಚಲಿಸುತ್ತಿದ್ದ ತಮ್ಮ ಎಸ್‌ಯುವಿ ವಾಹನದ ಬದಿಯಲ್ಲಿ ನಿಂತು ಸ್ವಲ್ಪ ದೂರ ಸಾಗಿದ್ದರು. ಕಾಂಗ್ರೆಸ್ ಪ್ರಧಾನಿ ಮೋದಿಯ ಈ ವರ್ತನೆ ರಾಜಕೀಯ ರೋಡ್ ಶೋಗೆ ಸಮ ಎಂದು ಆರೋಪಿಸಿದೆ. ಘಟನೆಯ ಬಗ್ಗೆ ಪರಿಶೀಲನೆಯನ್ನು ನಡೆಸಲಾಗುವುದು ಎಂದು ಗುಜರಾತ್‌ನ ಮುಖ್ಯ ಚುನಾವಣಾಧಿಕಾರಿ ಬಿಬಿ ಸ್ವೈನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News