ಅನ್ಯಧರ್ಮದ ವ್ಯಕ್ತಿಯನ್ನು ವಿವಾಹವಾದ ಪಾರ್ಸಿ ಮಹಿಳೆಗೆ ದೇವಾಲಯ ಪ್ರವೇಶಕ್ಕೆ ಅವಕಾಶ : ಸುಪ್ರೀಂ ಆದೇಶ

Update: 2017-12-14 16:01 GMT

ಸೂಚನೆ ಹೊಸದಿಲ್ಲಿ, ಡಿ.14: ಬೇರೆ ಧರ್ಮದ ವ್ಯಕ್ತಿಯನ್ನು ವಿವಾಹವಾಗಿರುವ ಪಾರ್ಸಿ ಮಹಿಳೆಗೆ ಪಾರ್ಸಿ ಟ್ರಸ್ಟ್‌ನ ಅಧೀನದಲ್ಲಿರುವ ದೇವಾಲಯ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಆದೇಶ ಜಾರಿ ಮಾಡಿದೆ.

ಹಿಂದೂ ಧರ್ಮೀಯನನ್ನು ವಿವಾಹವಾಗಿದ್ದ ಪಾರ್ಸಿ ಮಹಿಳೆಗೆ ಸಂಬಂಧಿಕರ ಅಂತ್ಯಕ್ರಿಯೆ ಮತ್ತಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲು ಸಿದ್ಧ ಎಂದು ಬಲ್ಸಾರ್ ಪಾರ್ಸಿ ಟ್ರಸ್ಟ್ ಸುಪ್ರೀಂಕೋರ್ಟ್‌ಗೆ ತಿಳಿಸಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಆದೇಶ ಜಾರಿಗೊಳಿಸಿದೆ.

  ಹಿಂದೂ ಧರ್ಮೀಯನನ್ನು ವಿವಾಹವಾಗಿದ್ದರೂ ತನ್ನ ಧರ್ಮವನ್ನು ಉಳಿಸಿಕೊಂಡಿದ್ದ ಗೂಲ್‌ರೋಖ್ ಗುಪ್ತಾ ಎಂಬ ಪಾರ್ಸಿ ಮಹಿಳೆಗೆ ದೇವಾಲಯವನ್ನು ಮತ್ತು ‘ಮೌನ ಗೋಪುರ’(ಪಾರ್ಸಿ ಸಮುದಾಯದ ವ್ಯಕ್ತಿ ಮೃತಪಟ್ಟಾಗ ಅಂತ್ಯ ಸಂಸ್ಕಾರ ನಡೆಸುವ ಸ್ಥಳ)ವನ್ನು ಪ್ರವೇಶಿಸಲು ನಿರ್ಬಂಧ ಹೇರಲಾಗಿತ್ತು. ಇದನ್ನು ಪ್ರಶ್ನಿಸಿ ಗುಪ್ತಾ ಸಲ್ಲಿಸಿದ್ದ ಮನವಿಯನ್ನು 2010ರಲ್ಲಿ ಅಲಹಾಬಾದ್ ಹೈಕೋರ್ಟ್ ತಳ್ಳಿಹಾಕಿತ್ತು.

 ಆದರೆ ಸಮುದಾಯದ ಹಿರಿಯರ ನಿರ್ದೇಶನವನ್ನು ಪಾಲಿಸುವುದಾದರೆ ತನ್ನ ತಂದೆ ತಾಯಿ ಮೃತಪಟ್ಟಾಗ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲೂ ಸಾಧ್ಯವಾಗುವುದಿಲ್ಲ . ಆದ್ದರಿಂದ ತನ್ನ ಅರ್ಜಿಯನ್ನು ಮರುಪರಿಶೀಲಿಸಬೇಕು ಎಂದು ಗುಪ್ತಾ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು, ಅರ್ಜಿದಾರರ ಹೆತ್ತವರು ಮೃತಪಟ್ಟ ಸಂದರ್ಭ ವೌನಗೋಪುರವನ್ನು ಪ್ರವೇಶಿಸಲು ಅವಕಾಶ ನೀಡಬಹುದೇ ಎಂದು ಟ್ರಸ್ಟ್‌ನ ವಕೀಲರನ್ನು ಪ್ರಶ್ನಿಸಿತ್ತು. ಅಲ್ಲದೆ ಅನ್ಯಧರ್ಮದ ವ್ಯಕ್ತಿಯನ್ನು ವಿವಾಹವಾಗುವ ಮಹಿಳೆ ತನ್ನ ಧಾರ್ಮಿಕ ಅಸ್ಮಿತೆಯನ್ನು ಕಳೆದುಕೊಳ್ಳುತ್ತಾಳೆ ಎನ್ನುವ ಯಾವ ಕಾನೂನೂ ಇಲ್ಲ ಎಂದು ಸ್ಪಷ್ಟಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News