ಪಾದೂರು- ತೋಕೂರು ಪೈಪ್‌ಲೈನ್ ಕಾಮಗಾರಿಗೆ ತಡೆ: ಹಲವರ ಬಂಧನ

Update: 2017-12-14 16:21 GMT

ಕಾಪು, ಡಿ. 14: ಪಾದೂರು-ತೋಕೂರು ಐಎಸ್‌ಪಿಆರ್‌ಎಲ್ ಯೋಜನೆಗಾಗಿ ಗುರುವಾರೆ ಪೊಲೀಸ್ ಬಂದೋಬಸ್ತ್‌ನೊಂದಿಗೆ ನಡೆಯುತಿದ್ದ ಪೈಪ್‌ಲೈನ್ ಕಾಮಗಾರಿಗೆ ಸ್ಥಳೀಯರು ತಡೆಯೊಡ್ಡಲು ಮುಂದಾಗಿದ್ದು, ಪ್ರತಿಭಟನಾನಿರತರನ್ನು ಬಂಧಿಸಿದ ಘಟನೆ ಕಳತ್ತೂರಿನಲ್ಲಿ ಗುರುವಾರ ನಡೆದಿದೆ.

ಕೇಂದ್ರ ಸರ್ಕಾರ ಸ್ವಾಮ್ಯದ ಕಚ್ಚಾತೈಲ ಸಂಗ್ರಹಣಾ ಘಟಕ ಐಎಸ್‌ಪಿಆರ್‌ಎಲ್ ಯೋಜನೆಗಾಗಿ ಪಾದೂರು-ತೋಕೂರು ಪೈಪ್‌ಲೈನ್ ಕಾಮಗಾರಿಯಲ್ಲಿ ನೈಜ ಸಂತ್ರಸ್ತರಿಗೆ ಪರಿಹಾರ ಕೊಡದೇ ಕಡೆಗಣಿಸುತ್ತಿರುವುದರ ವಿರುದ್ಧ ಕಾಮಗಾರಿಗೆ ನಾಲ್ಕು ತಿಂಗಳ ಹಿಂದೆ ತಡೆಯೊಡ್ಡಿದ್ದರು. ಆ ಬಳಿಕ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ಜಿಲ್ಲಾಡಳಿತದ ಮಾತುಕತೆ ನಡೆಸಿ ಸಂಧಾನ ನಡೆಸುವುದಾಗಿ ಹೇಳಲಾಗಿತ್ತು. ಜಿಲ್ಲಾಡಳಿತವೂ ಈ ಬಗ್ಗೆ ಸಮರ್ಪಕವಾಗಿ ಸಭೆಯನ್ನು ನಡೆಸದೆ ನೈಜ ಸಂತ್ರಸ್ತರನ್ನು ವಂಚಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದರು.

ಗುರುವಾರ ಏಕಾಏಕಿ ಜಿಲ್ಲಾಡಳಿತವು ಪೊಲೀಸು ಬಿಗು ಬಂದೋಬಸ್ತಿನಲ್ಲಿ ಕಾಮಗಾರಿ ಮುಂದುವರೆಸಲು ಮುಂದಾಗಿದ್ದರು. ಆದರೆ ಮಾಹಿತಿ ಪಡೆದ ಅತ್ಯಧಿಕ ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿ ಸಂದರ್ಭ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಮಹಿಳೆಯರು ಜೆಸಿಬಿಯ ಎದುರು ನಿಂತು ಕಾಮಗಾರಿ ನಡೆಸದಂತೆ ಎಚ್ಚರಿಸಿದ್ದರು. ಉಡುಪಿ ತಾಲೂಕು ತಹಶೀಲ್ದಾರರಾದ ಪ್ರದೀಪ್ ವರ್ಣೇಕರ್, ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್ ವಿ.ಎಸ್., ಪ್ರತಿಭಟನಾಕಾರರನ್ನು ಪ್ರತಿಭಟನೆ ನಡೆಸದಂತೆ ಸಾಕಷ್ಟು ಮನವೊಲಿಸಿದರು.

ಆದರೆ ಇದಕ್ಕೆ ಜಗ್ಗದ ಪ್ರತಿಭಟನಾಕಾರರು ಕಾಮಗಾರಿಗೆ ತಡೆಯೊಡ್ಡಿದರು. ಕಳತ್ತೂರು-ಪಾದೂರು-ಕುತ್ಯಾರು ಜನಜಾಗೃತಿ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು, ಜಿಲ್ಲಾ ಪಂಚಾಯತ್ ಸದಸ್ಯರಾದ ಶಿಲ್ಪಾ ಜಿ.ಸುವರ್ಣ, ಮಜೂರು ಗ್ರಾಮ ಪಂ. ಅಧ್ಯಕ್ಷ ಸಂದೀಪ್ ರಾವ್, ಉಪಾಧ್ಯಕ್ಷ ಸಹನಾ ತಂತ್ರಿ ಸಹಿತ ಸುಮಾರು 20ಕ್ಕೂ ಮಿಕ್ಕಿ ಪ್ರತಿಭಟನಕಾರರು ಬಂಧನಕ್ಕೊಳಗಾಗಿದ್ದು, ಶಿರ್ವ ಪೊಲೀಸು ಠಾಣೆಯತ್ತ ಕರೆದೊಯ್ಯಲಾಗಿರುತ್ತದೆ.

ಜಿಲ್ಲಾ ಪಂಚಾಯತ್ ಸದಸ್ಯರಾದ ಶಿಲ್ಪಾ ಜಿ.ಸುವರ್ಣ ಮಾತನಾಡಿ, ನೈಜ ಸಂತ್ರಸ್ತರಿಗೆ ಪರಿಹಾರ ಕೊಡಲೇಬೇಕಿದೆ. ಜಿಲ್ಲಾಡಳಿತವು ಕಂಪೆನಿಯ ಬಗ್ಗೆ ಆಲೋಚಿಸುವುದನ್ನು ಬಿಟ್ಟು ಬಡ ಜನರ ಬಗ್ಗೆ ಕಾಳಜಿ ತೋರಬೇಕಿದೆ. ಸ್ಪೋಟದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಕಂಪೆನಿಯಿಂದ ಕೂಡಲೇ ಪರಿಹಾರ ಒದಗಿಸಲಿ. ಈ ಬಗ್ಗೆ ಮುಂದಕ್ಕೂ ಹೋರಾಟವನ್ನು ನಡೆಸಲಿದ್ದು, ಕಾನೂನು ಹೋರಾಟದ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದರು.

ಪ್ರತಿಭಟನಕಾರರು ಬಂಧನಕ್ಕೊಳಗಾದ ಬಳಿಕ ಆಗಮಿಸಿದ್ದ ಕಾಪು ಕ್ಷೇತ್ರದ ಶಾಸಕರಾದ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ರಾಷ್ಟ್ರದ ಹಿತದೃಷ್ಟಿಯ ಯೋಜನೆ ಎಂದು ಪರಿಗಣಿಸಿ ಗ್ರಾಮಸ್ಥರು ಈ ಯೋಜನೆಗೆ ಸಹಕಾರ ನೀಡಿದ್ದಾರೆ. ಕಾಮಗಾರಿಯ ಸಂದರ್ಭ ಸ್ಪೋಟದಿಂದ ಬಹಳಷ್ಟು ಹಾನಿ ಸಂಭವಿಸಿದೆ. ಕೆಲವರಿಗೆ ಪರಿಹಾರ ಕಂಪೆನಿ ನೀಡಿದೆ. ಪ್ರಸ್ತಾಪ ಆಗದ ಕೆಲವು ಸಂತ್ರಸ್ಥರ ಪರಿಹಾರ ಧನ ಬಾಕಿ ಉಳಿದಿತ್ತು. ಕೇಂದ್ರ ಸರಕಾರದ ಯೋಜನೆ ಇದಾಗಿದ್ದು, ಸಂಸದೆ ಅವರೂ ಕೂಡಾ ಈ ಬಗ್ಗೆ ಗಮನ ಹರಿಸಿ ಪರಿಹಾರ ಒದಗಿಸಿಕೊಡಲು ಒತ್ತಾಯಿಸಿ ಜನರಿಗೆ ಪರಿಹಾರ ಕೊಡಿಸುವ ಕೆಲಸ ಮಾಡಬೇಕಿದೆ. ಈ ಮೊದಲು ರಾಜ್ಯದ ಮುಖ್ಯಕಾರ್ಯದರ್ಶಿ ಬಳಿ ಮಾತನಾಡಿ ದೇಶದಲ್ಲಿಯೇ ಪ್ರಥಮ ಬಾರಿಗೆ ಎಂಬಂತೆ ಹಲವರಿಗೆ ಪರಿಹಾರ ಹಣ ಒದಗಿಸಲಾಗಿದೆ. ಈ ಬಾರಿಯೂ ಅವರ ಬಳಿ, ಕಂಪೆನಿಯ ಮುಖ್ಯಸ್ಥರಿಗೆ ಒತ್ತಾಯಿಸಿ ಪರಿಹಾರ ಒದಗಿಸುವ ಕೆಲಸ ಕಾರ್ಯ ಮಾಡುತ್ತೇನೆ ಎಂದರು.

ಡಿ.ಸಿ.ಐ.ಬಿ. ಇನ್ಸ್‌ಪೆಕ್ಟರ್ ಸಂಪತ್ ಕುಮಾರ್, ಕಾಪು ಕಂದಾಯಾಧಿಕಾರಿ ರವಿಶಂಕರ್, ಶಿರ್ವ ಪಿ.ಎಸ್.ಐ. ನರಸಿಂಹ ಶೆಟ್ಟಿ, ಪೊಲೀಸು ಸಿಬ್ಬಂದಿಯವರು, ಕಂದಾಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News