ಅಡುಗೆಗೆ ಎಲ್‌ಪಿಜಿ ಪರ್ಯಾಯವಾಗಿ ಮಿಥೆನಾಲ್ ಕಿಟ್ ಬಳಸಲು ಚಿಂತನೆ: ಡಾ.ವಿ.ಕೆ.ಸಾರಸ್ವತ್
ಮಂಗಳೂರು, ಡಿ.15: ದೇಶದಲ್ಲಿ ಉರುವಲು ಇಲ್ಲದ ಕಡೆಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಬದಲಾಗಿ ಮಿಥೆನಾಲ್ ಕಿಟ್‌ನ್ನು ಅಡುಗೆ ಅನಿಲವಾಗಿ ಬಳಸುವ ಚಿಂತನೆ ನಡೆಸಲಾಗುತ್ತಿದೆ ಎಂದು ರಾಷ್ಟ್ರೀಯ ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಸಾರಸ್ವತ್ ತಿಳಿಸಿದ್ದಾರೆ.
ಸುರತ್ಕಲ್‌ನಲ್ಲಿರುವ ಕರ್ನಾಟಕದ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ತಾಂತ್ರಿಕ ಶಿಕ್ಷಣ ಸಂಸ್ಥೆಯ 25ನೆ ಅಂತಾರಾಷ್ಟ್ರೀಯ ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ದ ಬಳಿಕ ಕರೆದ ಸುದ್ದಿಗೊಷ್ಠಿಯಲ್ಲಿಂದು ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ಕಚ್ಚಾ ತೈಲ ಬಳಕೆಯನ್ನು ಕಡಿತಗೊಳಿಸುವುದಕ್ಕಾಗಿ ನವೀಕರಿಸಬಹುದಾದ ಇಂಧನವಾಗಿರುವ ಮಿಥೆನಾಲ್ ಬಳಕೆಯನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಮಿಥೆನಾಲ್ ನ್ನು ಪೆಟ್ರೋಲ್ ಜೊತೆ ಶೇ.20ರ ಪ್ರಮಾಣದಲ್ಲಿ ಮಿಶ್ರಣ ಮಾಡಿ ಬಳಸಬಹುದು ಎಂದವರು ವಿವರಿಸಿದರು.
ಜೈವಿಕ ತ್ಯಾಜ್ಯ, ಕಲ್ಲಿದ್ದಲು ಹಾಗೂ ಇತರ ನವೀಕರಿಸಬಹುದಾದ ಮೂಲಗಳಿಂದ ತಯಾರಿಸಬಹುದಾದ ಮಿಥೆನಾಲ್‌ನ್ನು ಹೆಚ್ಚು ಉತ್ಪಾದಿಸುವ ಪ್ರಯತ್ನ ನಡೆಯುತ್ತಿದೆ. ಕಚ್ಚಾ ತೈಲದ ಆಮದನ್ನು ಕಡಿಮೆಗೊಳಿಸಿ ಮಿಥೆನಾಲ್ ಬಳಕೆಯನ್ನು ಅಧಿಕಗೊಳಿಸುವ ಮೂಲಕ ಭಾರತವನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಾರಸ್ವತ್ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಹೊಗೆರಹಿತ ಅಡುಗೆ ಇಂಧನ ವಾಗಿ ಮಿಥೆನಾಲ್‌ನ್ನು ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲು ಸಾಧ್ಯ. ಉತ್ತಮ ದಹನ ಸಾಮರ್ಥ್ಯ ಹೊಂದಿರುವ ಮಿಥೆನಾಲ್ ಅನ್ನು ಎಲ್‌ಪಿಜಿ ಸಿಲಿಂಡರ್ ರೀತಿಯಲ್ಲಿ ಬಳಸಲು ಸಾಧ್ಯ ಎಂದವರು ಹೇಳಿದರು.
2020ರ ವೇಳೆಗೆ ಯೂರೋ 6 ಪೆಟ್ರೋಲಿಯಂ ಬಿಡುಗಡೆ
2020ರ ವೇಳೆ ಯೂರೋ 6 ಪೆಟ್ರೋಲಿಯಂ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್‌ನ ಅಧ್ಯಕ್ಷ ಸಂಜೀವ್ ಸಿಂಗ್ ತಿಳಿಸಿದ್ದಾರೆ.
ಎನ್‌ಐಟಿಕೆಯ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಕೂಡಾ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ದಹನ ಕ್ರಿಯೆಯ ಸಂದರ್ಭ ಬಿಡುಗಡೆಯಾಗುವ ವಾಯು ಮಾಲಿನ್ಯಕಾರಕ ಅಂಶಗಳನ್ನು ಸಾಕಷ್ಟು ಕಡಿಮೆಯಾಗುವಮಂತೆ ಮಾಡಿರುವ ಸಂಸ್ಕರಿತ ಪೆಟ್ರೋಲ್ ಉತ್ಪನ್ನವಾಗಿದೆ ಯೂರೋ 6.
2018ರಲ್ಲಿ ಸಂಸ್ಕರಿಸಲಾದ ನೂತನ ಪೆಟ್ರೋಲಿಯಂ ಉತ್ಪನ್ನ ‘ಬಿಎಸ್6’ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಸಿಂಗ್ ತಿಳಿಸಿದರು.
ಎನ್‌ಐಟಿಕೆ ಸುರತ್ಕಲ್‌ನ ನಿರ್ದೇಶಕ ಪ್ರೊ.ಉಮಾಮಹೇಶ್ವರ ರಾವ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.