ಉಡುಪಿ ಎಸ್ಪಿ ಕಚೇರಿ ಬಳಿ ಹಾಕಿದ್ದ ಭೂಗತ ಪಾತಕಿ ಬನ್ನಂಜೆ ರಾಜನ ಕಟೌಟ್ ತೆರವು!
ಉಡುಪಿ, ಡಿ.15: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕಚೇರಿ ಸಮೀಪ ದಲ್ಲೇ ಹಾಕಲಾಗಿದ್ದ ಭೂಗತ ಪಾತಕಿ ಬನ್ನಂಜೆ ರಾಜನಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಕಟೌಟನ್ನು ನಗರಸಭೆ ಅಧಿಕಾರಿಗಳು ಇಂದು ಮಧ್ಯಾಹ್ನ ವೇಳೆ ತೆರವುಗೊಳಿಸಿರುವುದು ವರದಿಯಾಗಿದೆ.
ಇಂದು ಬನ್ನಂಜೆ ರಾಜನ ಹುಟ್ಟುಹಬ್ಬ ಆಗಿರುವುದರಿಂದ ನೋಂದಾಯಿತ ಸಂಸ್ಥೆ ಎಂದು ಹೇಳಿಕೊಂಡಿರುವ ಬನ್ನಂಜೆ ರಾಜ ಅಭಿಮಾನಿಗಳ ಬಳಗವು ಬನ್ನಂಜೆ ಯಲ್ಲಿರುವ ಉಡುಪಿ ಎಸ್ಪಿ ಕಚೇರಿಗೆ ತೆರಳುವ ರಸ್ತೆಯ ಜಂಕ್ಷನ್‌ನಲ್ಲಿ "ಸಮಾಜ ಸೇವಕ ಬಡವರ ರಕ್ಷಕ ಹಾಗೂ ಮೆಚ್ಚಿನ ನಾಯಕರಾದ ಅಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಬರೆದು ಬೃಹತ್ ಕಟೌಟನ್ನು ಹಾಕಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ವೈರಲ್ ಆಗಿದ್ದು, ಕೆಲವು ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಸಾರಗೊಂಡಿತ್ತು. ಆದುದರಿಂದ ಜಿಲ್ಲಾಧಿಕಾರಿ ಆದೇಶದಂತೆ ಉಡುಪಿ ನಗರಸಭೆಯ ಕಂದಾಯ ಅಧಿಕಾರಿ ಚಂದ್ರ ಪೂಜಾರಿ ನೇತೃತ್ವದಲ್ಲಿ ಬನ್ನಂಜೆ ರಾಜನ ಕಟೌಟನ್ನು ತೆರವುಗೊಳಿಸಲಾಯಿತು. ಈ ಕಟೌಟನ್ನು ಯಾರು ಹಾಕಿರುವುದು ಎಂಬುದು ಈವರೆಗೆ ತಿಳಿದುಬಂದಿಲ್ಲ.