‘ಸಂಗೀತ ಕಲೆ ಉಳಿಯಲು ಸಹೃದಯಿಗಳ ಪ್ರೋತ್ಸಾಹ ಅಗತ್ಯ’
ಉಡುಪಿ, ಡಿ.15: ನಾಡಿನ ಹಲವು ದಾರ್ಶನಿಕರು ಸಮಾಜದ ಒಳಿತಿಗಾಗಿ ಶ್ರೇಷ್ಠ ಚಿಂತನೆಗಳನ್ನು ಸಾರಿದ್ದಾರೆ. ಅವರು ತಮ್ಮ ಚಿಂತನೆಗಳನ್ನು ಮಧುರ ಸಂಗೀತದ ಮೂಲಕ ಅಜರಾಮರಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಗೀತ ಕಲೆಯನ್ನು ಉಳಿಸಿ, ಬೆಳೆಸುವುದಕ್ಕೆ ಸಹೃದಯಿಗಳ ಪ್ರೋತ್ಸಾಹ ಅಗತ್ಯ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಹೇಳಿದ್ದಾರೆ.
ಉಡುಪಿಯ ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ಎಂಜಿಎಂ ಕಾಲೇಜು ಉಡುಪಿ ಹಾಗೂ ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಪ್ರಾರಂಭಗೊಂಡ ಎರಡು ದಿನಗಳ 40ನೇ ವಾದಿರಾಜ ಕನಕದಾಸ ಸಂಗೀತೋತ್ಸವ ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ, ಕಲಾ ವಿಮರ್ಶಕ ಎ.ಈಶ್ವರಯ್ಯ ಮಾತನಾಡಿ, ಹಲವು ದಶಕಗಳ ಹಿಂದೆ ಉಡುಪಿಯಲ್ಲಿ ವಾದಿರಾಜ ಕನಕದಾಸ ಸಂಗೀತೋತ್ಸವ ಪ್ರಾರಂಭಗೊಂಡ ನೆನಪುಗಳನ್ನು ಮೆಲುಕು ಹಾಕಿದರು. ಹಲವರ ಪರಿಶ್ರಮದಿಂದ ಇಂದು ವಾದಿರಾಜ ಮತ್ತು ಕನಕದಾಸ ಸಂಗೀತೋತ್ಸವ ನಮ್ಮ ಕನಸಿನಂತೆ ನಾಡಿನ ಪ್ರತಿಷ್ಠಿತ ಸಂಗೀತ ಉತ್ಸವವಾಗಿ ಪರಿಗಣಿತವಾಗಿದೆ ಎಂದರು.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು. ಕನಕದಾಸ ಅಧ್ಯಯನ ಪೀಠದ ಸಂಯೋಜಕ ಪ್ರೊ.ವರದೇಶ್ ಹಿರೇಗಂಗೆ ಸ್ವಾಗತಿಸಿದರು. ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕಿ ಉಮಾಶಂಕರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಯೋಜನಾಧಿಕಾರಿ ಡಾ.ಅಶೋಕ್ ಆಳ್ವ ವಂದಿಸಿ, ಭ್ರಾಮರಿ ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಅನಂತರ ನಡೆದ ವಾದಿರಾಜ-ಕನಕದಾಸ ಪ್ರಪಂಚ ವಿಚಾರಸಂಕಿರಣದಲ್ಲಿ ಪ್ರೊ.ಕೆ.ಪಿ.ರಾವ್ ಅವರು ವಾದಿರಾಜ-ಕನಕದಾಸರ ಕಾಲದ ಸುತ್ತಮುತ್ತ, ಪ್ರೊ. ಉದ್ಯಾವರ ಮಾಧಾಚಾರ್ಯರು ವಾದಿರಾಜ ಸಾಹಿತ್ಯದ ತಾತ್ವಿಕತೆ ಹಾಗೂ ಡಾ.ಪಾದೇಕಲ್ಲು ವಿಷ್ಣು ಭಟ್ಟ ಅವರು ಕನಕದಾಸ ಸಾಹಿತ್ಯದ ತಾತ್ವಿಕತೆ ವಿಷಯದ ಕುರಿತು ವಿಚಾರ ಮಂಡಿಸಿದರು. ಎ. ಈಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು.
ಅಪರಾಹ್ನದ ಬಳಿಕ ಪ್ರೊ.ಅರವಿಂದ ಹೆಬ್ಬಾರ್ ಅವರು ಕರ್ನಾಟಕ ಸಂಗೀತದಲ್ಲಿ ವಾದಿರಾಜ ಕನಕದಾಸರು, ಟಿ.ರಂಗ ಪೈ ಅವರು ಹಿಂದೂಸ್ಥಾನಿ ಸಂಗೀತದಲ್ಲಿ ವಾದಿರಾಜ ಕನಕದಾಸರು ವಿಷಯದ ಕುರಿತು ಮಾತನಾಡಿದರು. ಸಂಜೆ ಸಮನ್ವಿ ಮತ್ತು ಅರ್ಚನಾರಿಂದ ಕರ್ನಾಟಕ ಸಂಗೀತ ಹಾಗೂ ಮಣಿಪಾಲದ ರವಿಕಿರಣ್‌ರಿಂದ ಹಿಂದೂಸ್ಥಾನಿ ಸಂಗೀತ ಕಚೇರಿ ನಡೆಯಿತು.