×
Ad

ನ್ಯಾನೋ ತಂತ್ರಜ್ಞಾನದ ಬಗ್ಗೆ ವಿಜ್ಞಾನ ವಿಭಾಗದಲ್ಲಿ ಅಧ್ಯಯನ: ಪ್ರೊ. ಶಿವಪ್ರಸಾದ್

Update: 2017-12-15 22:44 IST

ಮಂಗಳೂರು, ಡಿ.15: ವಿಜ್ಞಾನ ವಿಭಾಗದಲ್ಲಿ ನ್ಯಾನೋ ತಂತ್ರಜ್ಞಾನದ ಕುರಿತು ಅಧ್ಯಯನ ನಡೆಯುತ್ತಿದೆ. ಇಂಜಿನಿಯರಿಂಗ್ ವಿದ್ಯಾಭ್ಯಾಸದಲ್ಲೂ ಇದನ್ನು ಕಲಿಸುವ ಬಗ್ಗೆ ಆಸಕ್ತಿ ತಾಳಬೇಕು ಎಂದು ಬೆಂಗಳೂರಿನ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಸೈಂಟಿಫಿಕ್ ರಿಸರ್ಚ್‌ನ ವಿಜ್ಞಾನಿ ಪ್ರೊ. ಶಿವಪ್ರಸಾದ್ ಹೇಳಿದರು.

ನಗರದ ಸಂತ ಅಲೋಶಿಯಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ವತಿಯಿಂದ ಮಂಗಳೂರು ವಿವಿ ಭೌತಶಾಸ್ತ್ರ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ಶುಕ್ರವಾರ ನಡೆದ ‘ನ್ಯಾನೋ, ಕ್ರಯೋಜನಿಕ್ಸ್ ಮತ್ತು ಬಾಹ್ಯಾಕಾಶ ಭೌತಶಾಸ್ತ್ರ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ‘ಎನ್‌ಸಿಎಸ್‌ಪಿ-2017’ನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾನೋ ತಂತ್ರಜ್ಞಾನದಿಂದ ಅನೇಕ ಪ್ರಯೋಜನಗಳಿವೆ. ಈ ನಿಟ್ಟಿನಲ್ಲಿ ಮೇಲ್ಮಟ್ಟದ ಸಂಶೋಧನೆಗಳೂ ನಡೆಯಲಿವೆ. ಮುಂದಿನ ದಿನಗಳಲ್ಲಿ ಈ ಕುರಿತ ಉನ್ನತ ಸಂಶೋಧನೆಗಳು ನಡೆಸಲಾಗುವುದು. ಮನುಷ್ಯನಿಗೆ ಬರುವ ಕಾಯಿಲೆಗಳು, ಮುಪ್ಪು, ಸಾವು ಮುಂತಾದವುಗಳನ್ನು ತಡೆಯಲೂ ನ್ಯಾನೋ ತಂತ್ರಜ್ಞಾನ ಪ್ರಯೋಜನಕಾರಿಯಾಗಬಹುದು ಎಂದು ಪ್ರೊ. ಶಿವಪ್ರಸಾದ್ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪ್ರವೀಣ್ ಮಾರ್ಟಿಸ್ ಮಾತನಾಡಿ, ನ್ಯಾನೋ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಹೆಚ್ಚು ಉಪಯುಕ್ತವಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈಗಿಂದಲೇ ಇದರ ಬಗ್ಗೆ ಉತ್ಸುಕರಾಗಬೇಕು ಎಂದರು.

ಬೆಂಗಳೂರಿನ ಐಐಎಸ್‌ಸಿ ವಿಜ್ಞಾನಿ ಡಾ. ದುರ್ಗೇಶ್ ನಾಡಿಗ್, ಇಸ್ರೋ ವಿಜ್ಞಾನಿ ಬಿ.ಆರ್. ಗುರುಪ್ರಸಾದ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಡಯೊನೀಶಿಯಸ್ ವಾಸ್, ರಿಜಿಸ್ಟ್ರಾರ್ ಡಾ. ಎ.ಎಂ. ನರಹರಿ, ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಲಾರೆನ್ಸ್ ಪಿಂಟೊ, ಸಂಚಾಲಕ ಡಾ. ಈಶ್ವರ್ ಭಟ್ ಎಸ್., ಡಿಬಿಟಿ ಸ್ಟಾರ್ ಕಾಲೇಜು ಸ್ಕೀಮ್‌ನ ಸಂಚಾಲಕ ಡಾ. ರೋನಾಲ್ಡ್ ನಝರತ್, ಫಿಸಿಕಲ್ ಸೈನ್ಸ್ ವಿಭಾಗದ ಡೀನ್ ಡಾ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ನೀಲಕಂಠನ್ ವಿ. ಕೆ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News