ಮಂಗಳೂರು: ಕರಾವಳಿ ಉತ್ಸವ ಮೆರವಣಿಗೆ ಕುರಿತು ಪೂರ್ವಭಾವಿ ಸಭೆ
ಮಂಗಳೂರು, ಡಿ.15: ಕರಾವಳಿ ಉತ್ಸವ ಮೆರವಣಿಗೆ ಸಮಿತಿಯ ಪೂರ್ವಭಾವಿ ಸಭೆಯು ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತ ರೇಣುಕಾಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ವಿಧಾನ ಸೌಧ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಕರಾವಳಿ ಉತ್ಸವದ ಮೆರವಣಿಗೆಯಲ್ಲಿ ಸುಮಾರು 15,000ಕ್ಕೂ ಅಧಿಕ ಮಂದಿ ಭಾಗವಹಿಸಲಿರುವರು ಎಂದು ಮೆರವಣಿಗೆ ಸಮಿತಿಯ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.
ಮೆರವಣಿಗೆಯನ್ನು ಡಿ.22ರಂದು ಸಂಜೆ 3:30ಕ್ಕೆ ನೆಹರೂ ಮೈದಾನದಲ್ಲಿ ಸಚಿವ ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ. ನೆಹರೂ ಮೈದಾನದಿಂದ ಹೊರಟ ಮೆರವಣಿಗೆಯು ಆರ್‌ಟಿಒ ಸರ್ಕಲ್, ಹಂಪನಕಟ್ಟೆ ವೃತ್ತ, ಕೆ.ಎಸ್. ರಾವ್ ರಸ್ತೆ, ನವಭಾರತ ಸರ್ಕಲ್, ಪಿವಿಎಸ್ ಲಾಲ್‌ಭಾಗ್ ರಸ್ತೆಯ ಮೂಲಕ 5:30ಕ್ಕೆ ಕರಾವಳಿ ಉತ್ಸವ ಮೈದಾನವನ್ನು ತಲುಪಲಿದೆ ಎಂದು ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಗಳು, ಆಡಳಿತ ಮೊಕೇಸ್ತರರು ಹಾಗೂ ಕಾಲೇಜಿನ ಪ್ರಾಂಶುಪಾಲರು ಪಾಲ್ಗೊಂಡಿದ್ದರು.