ಅಫ್ಘಾನ್‌ನಲ್ಲಿ ಬೆಂಕಿ ಹಚ್ಚುವುದು ಪಾಕ್ ಸೇನೆ

Update: 2017-12-15 17:29 GMT

ವಾಶಿಂಗ್ಟನ್, ಡಿ. 15: ಪಾಕಿಸ್ತಾನಿ ಸೇನೆಯು ಅಫ್ಘಾನಿಸ್ತಾನದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದೆ, ಅದೇ ವೇಳೆ ಬೆಂಕಿ ನಂದಿಸುವ ಪಾತ್ರವನ್ನೂ ಅದು ಕೇಳುತ್ತಿದೆ ಎಂದು ಅಮೆರಿಕಕ್ಕೆ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಹೇಳಿದ್ದಾರೆ.

ಶೀತಲ ಸಮರ ಕಾಲದಲ್ಲಿ ಪಾಕಿಸ್ತಾನವು ಅಮೆರಿಕದ ಅನುಕೂಲಸಿಂಧು ಮಿತ್ರದೇಶವಾಗಿತ್ತು, ಆದರೆ, ಭಾರತದೊಂದಿಗೆ ಸ್ಪರ್ಧಿಸುವ ಪಾಕಿಸ್ತಾನದ ಪ್ರಧಾನ ಗುರಿಯು ಅಮೆರಿಕದ ಗುರಿಯಾಗಿರಲಿಲ್ಲ ಎಂದು ಅವರು ಹೇಳಿದರು.

‘‘ಹಾಗಾಗಿ, ಈ ವಲಯದಲ್ಲಿ ಅಮೆರಿಕ ಮತ್ತು ಪಾಕಿಸ್ತಾನಗಳ ಹಿತಾಸಕ್ತಿಗಳು ತಾಳೆಯಾಗುವುದಿಲ್ಲ’’ ಎಂದರು.

‘‘ಅಮೆರಿಕವು ಒಂದು ಹಂತದಲ್ಲಿ ಈ ವಲಯವನ್ನು ಬಿಟ್ಟು ಹೋಗಲು ಬಯಸುತ್ತದೆ. ಅದಕ್ಕೂ ಮುನ್ನ ಬಲಿಷ್ಠ, ಸ್ಥಿರ ಹಾಗೂ ತಾಲಿಬಾನನ್ನು ಹತ್ತಿಕ್ಕುವ ಸಾಮರ್ಥ್ಯದ ಅಫ್ಘಾನ್ ಸರಕಾರಕ್ಕೆ ಅಧಿಕಾರವನ್ನು ಹಸ್ತಾಂತರಿಸಲು ಇಚ್ಛಿಸಿದೆ’’ ಎಂದು ಅವರು ‘ಸೈಫರ್ ಬ್ರೀಫ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

‘‘ಸಮಸ್ಯೆಯಿರುವುದು ಪಾಕಿಸ್ತಾನಿ ಸೇನೆಯು ತಾಲಿಬಾನ್‌ಗೆ ಬೆಂಬಲ ನೀಡುವುದರಲ್ಲಿ. ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡುವುದಾಗಿ ಪಾಕ್ ಸೇನೆ ಅಮೆರಿಕಕ್ಕೆ ಹೇಳುತ್ತದೆ. ಆದರೆ, ಬೆಂಕಿ ಹಚ್ಚುವವರೂ ಅವರೇ, ಬೆಂಕಿ ನಂದಿಸುವ ಪಾತ್ರ ವಹಿಸುತ್ತೇವೆಂದು ಹೇಳುವವರೂ ಅವರೇ. ಇದರಿಂದಾಗಿ ಪರಿಸ್ಥಿತಿ ಸಂಕೀರ್ಣವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News