ತಟಸ್ಥ ಇಂಟರ್‌ನೆಟ್‌ನಿಂದ ಹಿಂದೆ ಸರಿದ ಟ್ರಂಪ್ ಆಡಳಿತ

Update: 2017-12-15 17:33 GMT

ವಾಶಿಂಗ್ಟನ್, ಡಿ. 15: ಮುಕ್ತ ಇಂಟರ್‌ನೆಟ್ ಲಭ್ಯತೆಯನ್ನು ಖಾತರಿಪಡಿಸುವ ‘ನೆಟ್ ನ್ಯೂಟ್ರಾಲಿಟಿ’ (ತಟಸ್ಥ ಇಂಟರ್‌ನೆಟ್) ಕಾನೂನನ್ನು ಹಿಂದಕ್ಕೆ ಪಡೆಯುವ ನಿರ್ಣಯದ ಪರವಾಗಿ ಅಮೆರಿಕದ ಫೆಡರಲ್ ಸಂಪರ್ಕ ಆಯೋಗ ಗುರುವಾರ ಮತಹಾಕಿದೆ.

ಮಹತ್ವದ ತಟಸ್ಥ ಇಂಟರ್‌ನೆಟ್ ಖಾತರಿಪಡಿಸುವ ಕಾನೂನನ್ನು 2015ರಲ್ಲಿ ಅಮೆರಿಕದ ಒಬಾಮ ಆಡಳಿತವು ಜಾರಿಗೊಳಿಸಿತ್ತು.

ತಟಸ್ಥ ಇಂಟರ್‌ನೆಟ್ ಕಾನೂನನ್ನು ಹಿಂದಕ್ಕೆ ಪಡೆಯಬೇಕೆಂದು ಕೋರಿ ಆಯೋಗದ ಅಧ್ಯಕ್ಷ ಅಜಿತ್ ಪೈ ಸಲ್ಲಿಸಿರುವ ಪ್ರಸ್ತಾಪಕ್ಕೆ ಇದೀಗ ಅನುಮೋದನೆ ಲಭಿಸಿರುವುದು ಇಂಟರ್‌ನೆಟ್ ಸೇವಾ ಪೂರೈಕೆದಾರ ಕಂಪೆನಿಗಳಿಗೆ ಲಭಿಸಿದ ವಿಜಯವಾಗಿದೆ. ಇದರಿಂದಾಗಿ ಎಟಿಆ್ಯಂಡ್‌ಟಿ ಇಂಕ್, ಕಾಮ್‌ಕಾಸ್ಟ್ ಕಾರ್ಪ್, ವೆರಿರೆನ್ ಕಮ್ಯುನಿಕೇಶನ್ಸ್ ಇಂಕ್ ಮುಂತಾದ ಕಂಪೆನಿಗಳಿಗೆ, ಬಳಕೆದಾರರು ಯಾವ ವೆಬ್‌ಸೈಟ್‌ಗಳಿಗೆ ಹೋಗಬೇಕು ಎನ್ನುವುದನ್ನು ನಿರ್ಧರಿಸುವ ಅಧಿಕಾರ ಲಭಿಸಲಿದೆ.

ಒಬಾಮ ಆಡಳಿತದ ತಟಸ್ಥ ಇಂಟರ್‌ನೆಟ್ ಕಾನೂನು ನಿರ್ದಿಷ್ಟ ವೆಬ್‌ಸೈಟ್‌ಗಳಿಗೆ ಜನರು ಹೋಗದಂತೆ ತಡೆಯುವುದು, ನಿರ್ದಿಷ್ಟ ವೆಬ್‌ಸೈಟ್‌ಗಳಿಗೆ ಹೋಗಲು ದಾರಿ ತೋರಿಸುವುದು ಹಾಗೂ ಕೆಲವು ವೆಬ್‌ಸೈಟ್‌ಗಳಿಗೆ ಹೋಗಲು ಹೆಚ್ಚು ದರ ವಿಧಿಸುವುದರಿಂದ ಇಂಟರ್‌ನೆಟ್ ಸೇವಾ ಪೂರೈಕೆದಾರರನ್ನು ತಡೆದಿತ್ತು.

ತಟಸ್ಥ ಇಂಟರ್‌ನೆಟ್ ಕಾನೂನನ್ನು ಮುಂದುವರಿಸುವಂತೆ ಡೆಮಾಕ್ರಟಿಕ್ ಪಕ್ಷ, ಹಾಲಿವುಡ್, ಗೂಗಲ್‌ನ ಮಾತೃ ಕಂಪೆನಿ ಆಲ್ಫಾಬೆಟ್ ಇಂಕ್ ಮತ್ತು ಫೇಸ್‌ಬುಕ್ ಇಂಕ್‌ಗಳು ಪೈಯನ್ನು ಒತ್ತಾಯಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News