ಡಿ. 17: ಬಂಗಾರಕಟ್ಟೆ ಜುಮಾ ಮಸೀದಿಯಲ್ಲಿ ಧಾರ್ಮಿಕ ಮತ ಪ್ರಭಾಷಣ
ಬೆಳ್ತಂಗಡಿ, ಡಿ. 15: ಬದ್ರಿಯಾ ಜುಮಾ ಮಸೀದಿ ಬಂಗಾರಕಟ್ಟೆ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಬಂಗಾರಕಟ್ಟೆ ಶಾಖೆ ಇದರ ಆಶ್ರಯದಲ್ಲಿ ಜ. 14 ರಂದು ನಡೆಯುವ 5ನೇ ವರ್ಷದ ಸಾಮೂಹಿಕ ವಿವಾಹದ ಪ್ರಯುಕ್ತ ಧಾರ್ಮಿಕ ಮತ ಪ್ರಭಾಷಣ ಡಿ. 17ರಂದು ಮಡಂತ್ಯಾರು ಸಮೀಪದ ಬಂಗಾರಕಟ್ಟೆ ಜುಮ್ಮಾ ಮಸೀದಿಯ ಶಂಸುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ ಎಂದು ಸಂಚಾಲಕ ಮಹಮ್ಮದ್ ಹನೀಫ್ ತಿಳಿಸಿದರು.
ಅವರು ಶುಕ್ರವಾರ ಬೆಳ್ತಂಗಡಿ ವಾರ್ತಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು.
ಡಿ. 17 ರಂದು ರಾತ್ರಿ 7-30ಕ್ಕೆ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮ ನಡೆಯಲಿದ್ದು, ಕೊಲ್ಲಂನ ಪತ್ತನಾಪುರಂನ ಬಹು ಆಲ್‌ಃಆಫಿಲ್ ಸಿರಾಜುದ್ದೀನ್ ಅಲ್ ಖಾಸಿಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಮಸ್ತ ಕೇಂದ್ರ ಮುಶಾವರದ ಉಪಾಧ್ಯಕ್ಷ ಶೈಖುನ ಅಬ್ದುಲ್ ಜಬ್ಬಾರ್ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಿಜೆಎಂ ಗೌರವಾಧ್ಯಕ್ಷ ಅಲ್ ಹಾಜಿ ಮೊಯ್ದಿನ್ ಕುಂಞಿ ಅಧ್ಯಕ್ಷತೆ ವಹಿಸಲಿದ್ದು, ಬೆಳ್ತಂಗಡಿ ದಾರುಸ್ಸಲಾಂ ದಅವಾ ಕಾಲೇಜಿನ ಅಧ್ಯಕ್ಷ ಅಲ್‌ಹಾಜಿ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದುಆ ನೆರವೇರಿಸಲಿದ್ದಾರೆ. ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. 17ರಂದು ನಡೆಯವ ಕಾರ್ಯಕ್ರಮದಲ್ಲಿ ಸುಮಾರು 5000ಕ್ಕಿಂತಲೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಜಮಾತ್ ವ್ಯಾಪ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಯುವತಿಯರಿಗೆ ಕಂಕಣಭಾಗ್ಯ ಒದಗಿಸುವ ನಿಟ್ಟಿನಲ್ಲಿ ಕಳೆದ 4 ವರ್ಷಗಳಲ್ಲಿ 10 ಜೋಡಿಗಳಿಗೆ ಸಾಮೂಹಿಕ ವಿವಾಹವನ್ನು ನಡೆಸಲಾಗಿದೆ. ಜ. 14 ರಂದು ನಡೆಯುವ 5ನೇ ವರ್ಷದ ಸಾಮೂಹಿಕ ವಿವಾಹದಲ್ಲಿ ಈಗಾಗಲೇ 5 ಜೋಡಿಗಳು ಹೆಸರನ್ನು ನೋಂದಾಯಿಸಿಕೊಂಡಿದ್ಧಾರೆ. ಸುಮಾರು 10 ಲಕ್ಷಕಿಂತಲೂ ಹೆಚ್ಚು ಖರ್ಚು ತಗಲುತ್ತದೆ. ಈ ಕಾರ್ಯಕ್ರಮ ಎಲ್ಲಾ ಜಮಾತ್‌ನಲ್ಲೂ ನಡೆದರೆ ಆರ್ಥಿಕವಾಗಿ ಹಿಂದುಳಿದವರ ಪಾಲಿಗೆ ವರದಾನ ಆಗಬಹುದು ಎಂಬುದು ನಮ್ಮ ಆಶಯವಾಗಿದೆ ಎಂದರು.
ಸಂಘವು ರಕ್ತದಾನ, ಮನೆ ನಿರ್ಮಾಣ, ಶೌಚಾಲಯ ರಚನೆ ಇನ್ನಿತ ಸಾಮಾಜಿಕ ಸೇವೆಯಲ್ಲಿ ತೋಡಗಿಸಿಕೊಂಡಿದೆ. ಆರ್ಥಿಕವಾಗಿ ಸಮಸ್ಯೆಯಲ್ಲಿರುವ ಬಡವರಿಗೆ ಸಹಾಯವನ್ನು ಮಾಡುತ್ತಾ ಬಂದಿದೆ ಎಂದರು. ಸಹ ಸಂಚಾಲಕ ಅಶ್ರಫ್ ಸಾಲ್ಮರ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫೀಕ್, ಜತೆ ಕಾರ್ಯದರ್ಶಿ ಮಹಮ್ಮದ್ ಬಶೀರ್ ಬಳ್ಳಮಂಜ, ಸದಸ್ಯರಾದ ನವಾರ್ ಬಂಗಾರಕಟ್ಟೆ, ಮಹಮ್ಮದ್ ರಫೀಕ್ ಬಂಗೇರಕಟ್ಟೆ ಉಪಸ್ಥಿತರಿದ್ದರು.