ಸಿರಿಯ ಪ್ರತಿಪಕ್ಷಗಳಿಗೆ ಅಮೆರಿಕ, ಸೌದಿ ಪೂರೈಸಿದ ಶಸ್ತ್ರಗಳು ಐಸಿಸ್ ಬತ್ತಳಿಕೆಯಲ್ಲಿ

Update: 2017-12-15 18:03 GMT
ಸಾಂದರ್ಭಿಕ ಚಿತ್ರ

ಬೆರೂತ್ (ಲೆಬನಾನ್), ಡಿ. 15: ಅಮೆರಿಕ ಮತ್ತು ಸೌದಿ ಅರೇಬಿಯಗಳು ಸಿರಿಯದ ಸರಕಾರಿ ವಿರೋಧಿ ಗುಂಪುಗಳಿಗೆ ನೀಡುತ್ತಿರುವ ಶಸ್ತ್ರಾಸ್ತ್ರಗಳು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಗುಂಪಿನ ಪಾಲಾಗುತ್ತಿವೆ ಎಂದು ಶಸ್ತ್ರಾಸ್ತ್ರ ನಿಗಾ ಗುಂಪು ‘ಕಾನ್‌ಫ್ಲಿಕ್ಟ್ ಆರ್ಮಮೆಂಟ್ ರಿಸರ್ಚ್ (ಸಿಎಆರ್)’ ಗುರುವಾರ ಹೇಳಿದೆ.

ಯುದ್ಧಭೂಮಿಯಲ್ಲಿ ಪತ್ತೆಯಾಗಿರುವ ಶಸ್ತ್ರಾಸ್ತ್ರಗಳ ವಿಶ್ಲೇಷಣೆಯ ಆಧಾರದಲ್ಲಿ ಅದು ಈ ನಿರ್ಧಾರಕ್ಕೆ ಬಂದಿದೆ.

ಇಸ್ಲಾಮಿಕ್ ಸ್ಟೇಟ್‌ನ ಹೆಚ್ಚಿನ ಆಯುಧಗಳು ಇರಾಕ್ ಮತ್ತು ಸಿರಿಯ ಸೇನೆಗಳಿಂದ ದೋಚಿರುವಂಥವು ಎಂದು ಅದು ತಿಳಿಸಿದೆ. ಆದರೆ, ಕೆಲವು ಆಯುಧಗಳು ಸಿರಿಯ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ವಿರುದ್ಧ ಹೋರಾಡುತ್ತಿರುವ ಸಿರಿಯದ ವಿರೋಧಿ ಗುಂಪುಗಳಿಗೆ ಅಮೆರಿಕ ಮತ್ತು ಸೌದಿ ಅರೇಬಿಯಗಳು ನೀಡಿರುವಂಥವು ಎಂದಿದೆ.

 ‘‘ಹಲವಾರು ದೇಶರಹಿತ ಸಶಸ್ತ್ರ ಗುಂಪುಗಳು ಶಾಮೀಲಾಗಿರುವ ಸಿರಿಯ ಯುದ್ಧದಲ್ಲಿ ಯಾರು ಯಾರಿಗೆ ಪೂರೈಸುತ್ತಿರುವ ಶಸ್ತ್ರಾಸ್ತ್ರಗಳು ಯಾರ ಕೈ ಸೇರುತ್ತಿವೆ ಎನ್ನುವುದೇ ತಿಳಿಯದ ಪರಿಸ್ಥಿತಿ ಉಂಟಾಗಿದೆ’’ ಎಂದು ಸಿಎಆರ್‌ನ 200 ಪುಟಗಳ ವರದಿ ತಿಳಿಸಿದೆ.

2 ತಿಂಗಳಲ್ಲೇ ಐಸಿಸ್ ಕೈಗೆ ಕ್ಷಿಪಣಿ!

ಅಮೆರಿಕ ಖರೀದಿಸಿರುವ ಶಸ್ತ್ರಾಸ್ತ್ರಗಳು ಇಸ್ಲಾಮಿಕ್ ಸ್ಟೇಟ್‌ನ ಕೈ ಸೇರಿದ ಕನಿಷ್ಠ 12 ಪ್ರಕರಣಗಳನ್ನು ಸಿಎಆರ್ ದಾಖಲಿಸಿದೆ. ಈ ಶಸ್ತ್ರಾಸ್ತ್ರಗಳನ್ನು ಇಸ್ಲಾಮಿಕ್ ಸ್ಟೇಟ್ ಒಂದೋ ಯುದ್ಧಭೂಮಿಯಲ್ಲಿ ವಶಪಡಿಸಿಕೊಂಡಿರಬಹುದು ಅಥವಾ ಸಿರಿಯ ಪ್ರತಿಪಕ್ಷದಲ್ಲೇ ಆಗುವ ಮೈತ್ರಿಕೂಟ ಬದಲಾವಣೆಗಳ ಮೂಲಕ ಪಡೆದಿರಬಹುದು ಎಂದು ಅದು ಹೇಳಿದೆ.

ಒಂದು ಪ್ರಕರಣದಲ್ಲಿ, ಅಮೆರಿಕ ಪೂರೈಸಿದ ನಿರ್ದೇಶಿತ ಟ್ಯಾಂಕ್ ನಾಶಕ ಕ್ಷಿಪಣಿಯೊಂದು ಇರಾಕ್‌ನಲ್ಲಿರುವ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರಿಗೆ ಕೇವಲ ಎರಡು ತಿಂಗಳಲ್ಲೇ ಸಿಕ್ಕಿತ್ತು. ಆ ಕ್ಷಿಪಣಿಯನ್ನು ಅಮೆರಿಕ ಐರೋಪ್ಯ ದೇಶವೊಂದರಿಂದ ಖರೀದಿಸಿ ಸಿರಿಯದ ಪ್ರತಿಪಕ್ಷ ಗುಂಪೊಂದಕ್ಕೆ ಪೂರೈಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News