ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟಕ್ಕೆ ಪದ್ಮಶ್ರೀ ದೀಪಾ ಕರ್ಮಾಕರ್‌ ಚಾಲನೆ

Update: 2017-12-16 10:18 GMT

ಮಂಗಳೂರು. ಡಿ.16: ಕಠಿಣ ಪರಿಶ್ರಮದೊಂದಿಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದು ಕೊಡುವಂತವರಾಗಿ ಎಂದು ಒಲಿಂಪಿಕ್ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ, ಪದ್ಮಶ್ರೀ ಪುರಸ್ಕೃತ ಕಲಾತ್ಮಕ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಯುವ ಕ್ರೀಡಾ ಪಟುಗಳಿಗೆ ಶುಭಹಾರೈಸಿದರು.

 ದೇರಳಕಟ್ಟೆ ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವತಿಯಿಂದ ಕಣಚೂರು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಕ್ರೀಡಾಕೂಟ ‘ಅಗಾನ್ 2ಕೆ17’ ಅನ್ನು ಇಂದು ಬೆಳಗ್ಗೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಂಗಳೂರು ಪ್ರದೇಶಕ್ಕೆ ಆಗಮಿಸಿದಾಗ ತುಂಬಾ ಸಂತೋಷವಾಗಿದೆ. ಕಣಚೂರು ಶಿಕ್ಷಣ ಸಂಸ್ಥೆಯ ಕ್ರೀಡಾ ವ್ಯವಸ್ಥೆ ಮತ್ತು ಪೋತ್ಸಾಹ ಕಂಡು ಸಂತಸವಾಗಿದೆ ಎಂದವರು ನುಡಿದರು.

ದೀಪಾ ಕರ್ಮಾಕರ್ ಯಶಸ್ಸಿನ ಹಿಂದೆ ಕಠಿಣ ಪರಿಶ್ರಮ: ವಿಶ್ವೇಶ್ವರ ನಂದಿ
ಮುಖ್ಯ ಅತಿಥಿಯಾಗಿ  ಭಾಗವಹಿಸಿ ಮಾತನಾಡಿದ ಭಾರತ ಜಿಮ್ನಾಸ್ಟಿಕ್ ತಂಡದ ತರಬೇತುದಾರ ದೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ವಿಶ್ವೇಶ್ವರ ನಂದಿ, ಕ್ರೀಡಾ ಕ್ಷೇತ್ರದಲ್ಲಿ ನಿರಂತರ ಪರಿಶ್ರಮ, ಸತತ ಅಭ್ಯಾಸದಿಂದ ಸಾಧನೆ ಮಾಡಬಹುದು ಎನ್ನುವುದಕ್ಕೆ ದೀಪಾ ಕರ್ಮಾಕರ್ ಉತ್ತಮ ನಿದರ್ಶನ ಎಂದರು.

ಆಕೆ ದಿನದಲ್ಲಿ ಬೆಳಗ್ಗೆ 3 ಗಂಟೆ ಹಾಗೂ ಸಂಜೆ 3 ಗಂಟೆ ತರಬೇತಿಯಲ್ಲಿ ಭಾಗವಹಿಸುತ್ತಿದ್ದಳು. ಒಲಿಂಪಿಕ್ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಮೊದಲು ಪ್ರತಿದಿನ ಬೆಳಗ್ಗೆ ನಾಲ್ಕೂವರೆ ಗಂಟೆ, ಸಂಜೆ ನಾಲ್ಕೂವರೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಳು. ಆಕೆಯ ಮೇಲೆ ಒಂದು ರೀತಿಯ ಒತ್ತಡ ಇದ್ದರೂ ಅವುಗಳ ನಡುವೆಯೂ ಭಾಗವಹಿಸುವ ಸ್ಫೂರ್ತಿ, ಉತ್ಸಾಹ ಆಕೆಯಲ್ಲಿತ್ತು. ಯಾವಾಗ ತರಬೇತಿಗೆ ಕರೆದರೂ ‘‘ಐ ಯ್ಯಾಮ್ ರೆಡಿ ಸರ್....’’ಎನ್ನುತ್ತಾ ಭಾಗವಹಿಸುತ್ತಿದ್ದಳು ಪರಿಣಾಮವಾಗಿ ಆಕೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಆಯ್ಕೆಯಾಗಿ ಮಹತ್ವದ ಸಾಧನೆ ಮಾಡುವಂತಾಯಿತು ಎಂದವರು ವಿವರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ.ಯು.ಕೆ.ಮೋನು ಮಾತನಾಡುತ್ತಾ, ದೀಪಾ ಕರ್ಮಾಕರ್ ದೇಶದ ಕೀರ್ತಿಯನ್ನು ಎತ್ತರಕ್ಕೆ ಏರಿಸಿದ ಕ್ರೀಡಾ ಪ್ರತಿಭೆ. ನಮ್ಮ ಸಂಸ್ಥೆಯ ಕ್ರೀಡಾ ಕೂಟಕ್ಕೆ ಆಗಮಿಸಿ ಎಳೆಯ ಕ್ರೀಡಾ ಪಟುಗಳಿಗೆ ಸಾಧನೆ ಮಾಡಲು ಅವರು ಪ್ರೇರಣೆಯಾಗಿದ್ದಾರೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯದ ಸೆನೆಟ್ ಸದಸ್ಯ ಡಾ.ಯು.ಟಿ. ಇಪ್ತಿಕಾರ್ ಮಾತನಾಡಿ ಶುಭ ಹಾರೈಸಿದರು.

ಸಮಾರಂಭದಲ್ಲಿ ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹಿಮಾನ್, ಡೀನ್ ಡಾ.ವಿರೂಪಾಕ್ಷ ಹಾಗೂ ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್‌ನ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭ ದೀಪಾ ಕರ್ಮಾಕರ್, ಕೋಚ್ ವಿಶ್ವೇಶ್ವರ ನಂದಿ ಹಾಗೂ ಡಾ.ಯು.ಟಿ.ಇಪ್ತಿಕಾರ್‌ರನ್ನು ಕಣಚೂರು ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News