×
Ad

ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವರ ಹೆಸರಿನ ಅಂಚೆ ಚೀಟಿ ಬಿಡುಗಡೆ

Update: 2017-12-16 15:37 IST

ಬಂಟ್ವಾಳ, ಡಿ.16: ಡಾ.ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಓರ್ವ ಭಾವನಾಜೀವಿಯಾಗಿದ್ದು, ಗಾಂಧಿತತ್ವಗಳನ್ನು ಮೈಗೂಡಿಸಿಕೊಂಡಿರುವ ಸಾರ್ವಕಾಲಿಕ ವ್ಯಕ್ತಿ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಿಸಿದರು.

ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದ ಕವಿಶಿಷ್ಯ ಪಂಜೆ ಮಂಗೇಶರಾವ್ ವೇದಿಕೆಯಲ್ಲಿ ನಡೆದ ಡಾ.ಏರ್ಯ ಸಾಹಿತ್ಯ ಸಂಭ್ರಮ-2017 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಣ್ಣಪುಟ್ಟ ವಿಚಾರದಲ್ಲೂ ಡಾ.ಆಳ್ವ ಬೇಗನೇ ಭಾವುಕರಾಗುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಮಾತ್ರ ಉತ್ತಮ ಸಾಹಿತ್ಯ ಮೂಡಿ ಬರಲು ಸಾಧ್ಯ ಎಂದ ಡಾ.ಹೆಗ್ಗಡೆ, ಆಳ್ವರು ಹಿಂದೂ ಧರ್ಮದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ಇತರ ಧರ್ಮವನ್ನು ಅಧ್ಯಯನ ಮಾಡುವ ಮೂಲಕ ಎಲ್ಲರನ್ನೂ ಸಮಾನರಾಗಿ ಕಾಣುವ ಅವರ ವ್ಯಕ್ತಿತ್ವ ಹಿರಿದು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ವಿ.ವಿವೇಕ ರೈಯವರು ಈ ಸಂದರ್ಭ ಕಲಾವಿದ ಮಂಜು ವಿಟ್ಲ ವಿನ್ಯಾಸಗೊಳಿಸಿದ ಡಾ.ಏರ್ಯ ಅವರ ಅಂಚೆ ಚೀಟಿಯ ಚಿತ್ರವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ತಾನು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡಲು ಡಾ.ಆಳ್ವ ಕಾರಣ. ಬಾಲ್ಯದಿಂದ ತಾನು ಅವರೊಂದಿಗೆ ಒಡನಾಟವನ್ನು ಹೊಂದಿದ್ದೇನೆ. ಅವರ ಸಾಹಿತ್ಯಗಳು 20 ಮತ್ತು 21ನೆ ಶತಮಾನಕ್ಕೆ ಪೂರಕವಾಗಿದೆ ಎಂದರು.

ಬಂಟ್ವಾಳ ಪ್ರದೇಶವು ಶಿಕ್ಷಣ, ಸಹಕಾರಿ, ಸಾಹಿತ್ಯ, ಸಂಘಟನೆ ಹಾಗೂ ಧರ್ಮದ ಕೂಡು ಮಾರ್ಗವಾಗಿದ್ದು, ಇದೊಂದು ಕೂಡು ಕುಟುಂಬ ಇದ್ದಹಾಗೆ. ಅದಕ್ಕಾಗಿಯೇ ಜೋಡುಮಾರ್ಗ ಎಂದು ಹೆಸರು ಬಂದಿದೆ ಎಂದರು.

ಬೋಳಂತೂರು ಕೃಷ್ಣ ಪ್ರಭು ಪುಸ್ತಕ ಮಳಿಗೆ ಉದ್ಘಾಟಿಸಿದ ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಮಾತನಾಡಿ, ಡಾ. ಏರ್ಯ ಅಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಆಶಯ ನುಡಿಗಳನ್ನಾಡಿದ ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ, ಮನುಷ್ಯನಲ್ಲಿ ಮನುಷ್ಯತ್ವ ತುಂಬಬೇಕಾದರೆ ಸಜ್ಜನರ ಸಂಘ ಮಾಡಬೇಕು. ಪುಸ್ತಕ ಓದಬೇಕು ಎಂದು ಯುವಜನರಿಗೆ ಹಿತವಚನ ಹೇಳಿದರು.

ಪ್ರಪಂಚದ ಎಲ್ಲ ಒಳ್ಳೆಯ ವಿಚಾರಗಳು ನಮ್ಮೆಡೆಗೆ ಬರಲಿ, ಇಂದು ವೈಜ್ಞಾನಿಕ ಬೆಳವಣಿಗೆಗಳು ಮನುಷ್ಯನ ಹಾದಿ ತಪ್ಪಿಸುವಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಅಧ್ಯಕ್ಷ ಕೆ.ಸೇಸಪ್ಪಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ ಡಾ.ಏರ್ಯ ಸಾಕ್ಷಚಿತ್ರ ಪ್ರದರ್ಶನ ಉದ್ಘಾಟಿಸಿದರು.

ಗಾಯಕ ಚಂದ್ರಶೇಖರ ಕೆದ್ಲಾಯ ಅವರು ಏರ್ಯ ರಚಿಸಿದ ಗೀತೆಗಳನ್ನು ಹಾಡಿದರು. ಏರ್ಯ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷ ಕೆ. ಮೋಹನ ರಾವ್ ಸ್ವಾಗತಿಸಿದರು. ಸಂಚಾಲಕ ವಿಶ್ವನಾಥ ಬಂಟ್ವಾಳ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಇದೇ ವೇಳೆ ಏರ್ಯರನ್ನು ಡಾ.ವೀರೇಂದ್ರ ಹೆಗ್ಗಡೆ ಸನ್ಮಾನಿಸಿದರು. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಅಜಕ್ಕಳ ಗಿರೀಶ ಭಟ್ ವಂದಿಸಿದರು.ನಿವೃತ್ತ ಅಧ್ಯಾಪಕ, ಕಲಾವಿದ ಮಹಾಬಲೇಶ್ವರ ಹೆಬ್ಬಾರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News