ಏ.ಕೆ. ಕುಕ್ಕಿಲ ಅವರ ಎಣ್ಣೆ ಬತ್ತಿದ ಲಾಟೀನು ಕೃತಿಯ ದ್ವಿತೀಯ ಆವೃತ್ತಿ ಬಿಡುಗಡೆ

Update: 2017-12-17 08:08 GMT

ಮಂಗಳೂರು, ಡಿ. 16: ಸನ್ಮಾರ್ಗ ಪತ್ರಿಕೆಯ ಸಂಪಾದಕ ಏ ಕೆ ಕುಕ್ಕಿಲ ಅವರ 'ಎಣ್ಣೆ ಬತ್ತಿದ ಲಾಟೀನು' ಕೃತಿಯ ದ್ವಿತೀಯ ಆವೃತ್ತಿಯ ಬಿಡುಗಡೆ ಕಾರ್ಯಕ್ರಮ ಕಲ್ಲಡ್ಕದ ಅನುಗ್ರಹ ಮಹಿಳಾ ಕಾಲೇಜ್ ನಲ್ಲಿ ಶನಿವಾರ ನಡೆಯಿತು.

ರಾಜ್ಯ ಸರಕಾರದಿಂದ ಶೌರ್ಯ ಪುರಸ್ಕಾರ ಪಡೆದ ನೆಲ್ಯಾಡಿಯ ಸಂತ ಜಾರ್ಜ್ ಕಾಲೇಜ್ ನ ವಿದ್ಯಾರ್ಥಿ ನಿತಿನ್ ಕೆ ಆರ್ ಕೃತಿ ಬಿಡುಗಡೆಗೊಳಿಸಿದರು.

ವಿದ್ಯಾರ್ಥಿನಿ ಅಫ್ರೀನಾ ಮಾತನಾಡುತ್ತಾ 'ಈ ಕೃತಿಯ ಉದ್ದಕ್ಕೂ ಹೆಣ್ಣು ಮತ್ತು ಸಮಾಜದ ಕುರಿತಾಗಿ ವಿಶಿಷ್ಟ ಒಳನೋಟಗಳಿವೆ. ಉಮ್ರಾ ಯಾತ್ರೆಯ ಬಳಿಕ ಬರೆದ ಈ ಕೃತಿಯು ಯಾತ್ರಾನುಭವಕ್ಕಿಂತ ಹೊರತಾದ ಇವತ್ತಿನ ಸಾಮಾಜಿಕ ನೆಲೆಗಟ್ಟನ್ನು ಅತ್ಯಂತ ವಸ್ತುನಿಷ್ಠವಾಗಿ ಚರ್ಚಿಸುವ ಕೃತಿಯಾಗಿ ಇದು ನಮ್ಮನ್ನು ಕಾಡುತ್ತಾ ಹೋಗುತ್ತದೆ. ಹಿರಾ ಗುಹೆಯನ್ನು ಹತ್ತಿಳಿಯುವ ವೇಳೆ ಪ್ರವಾದಿ (ಸ) ಅವರ ಪತ್ನಿ ಖದೀಜಾ ಅವರ ಭಾವನೆಗಳನ್ನು ಕಟ್ಟಿಕೊಟ್ಟಿರುವ ರೀತಿ ಅನನ್ಯ. ಪ್ರತಿ ಸೂಕ್ಷ್ಮ ವಿಷಯದ ಬಗೆಗೂ ಆಳ ದೃಷ್ಟಿಯುಳ್ಳ ಈ ಕೃತಿಯನ್ನು ಓದುತ್ತಾ ಉಮ್ರಾ ಯಾತ್ರೆ ಮಾಡಿದ ಅನುಭವ ನನ್ನದಾಯಿತು' ಎಂದು  ಕೃತಿ ವಿಮರ್ಶೆ ಮಾಡಿದರು.

ಉಪನ್ಯಾಸಕಿ ಆಯಿಷಾ ನಸೀಬಾ ಮಾತನಾಡಿ, 'ಯಾತ್ರೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯ ಮೇಲೆ ಕ್ಪಕಿರಣವನ್ನು ಬೀರಿರುವ ಈ  ಕೃತಿಯು, ಹೆಣ್ಣನ್ನು ಅತ್ಯಂತ ಮನೋಜ್ಞವಾಗಿ ಕಟ್ಟಿಕೊಟ್ಟಿದೆ' ಎಂದರು. ಅನುಗ್ರಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ ಕೆ ಇಬ್ರಾಹೀಮ್ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭ  ಪ್ರಾಂಶುಪಾಲರಾದ ಜ್ಯೋತಿರತ್ನ ರೆಜಿನಾಲ್ಡ್, ಓದು ಪ್ರಕಾಶನದ ಪ್ರಕಾಶಕರಾದ ಖತೀಜತ್ ರಾಬಿಯಾ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯಾಸೀನ್ ಬೇಗ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅಸೀಬ ಕುರ್ ಆನ್ ಪಠಿಸಿದರು. ಅಝ್ಮಿಯ ಸ್ವಾಗತಿಸಿದರು. ಫಾತಿಮಾ ಝಕಿಯಾ ವಂದಿಸಿದರು ರಂಝೀನಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News