ಪೋಲಿಯೊ ನಿವಾರಣೆಯಾದಂತೆ ಎಚ್‌ಐವಿ ದೇಶದಲ್ಲಿ ಸಂಪೂರ್ಣ ನಿವಾರಣೆಯಾಗಬೇಕು: ಮಂಜುನಾಥ್

Update: 2017-12-16 13:26 GMT

ಪುತ್ತೂರು, ಡಿ. 16: ನಮ್ಮ ದೇಶದಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆ ಹಿಂದೆ ಗಣನೀಯವಾಗಿತ್ತು. ಆದರೆ ಇಂದು ಮಾಹಿತಿ ಕಾರ್ಯಾಗಾರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗುತ್ತಿದ್ದು, ದೇಶದಲ್ಲಿ ಪೋಲಿಯೊ ನಿವಾರಣೆಯಾದಂತೆ ಎಚ್‌ಐವಿ ಎಂಬ ಮಾರಕ ಕಾಯಿಲೆ ಸಂಪೂರ್ಣ ನಿವಾರಣೆಯಾಗಬೇಕು ಎಂದು ಪುತ್ತೂರಿನ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ಮಂಜುನಾಥ್ ಹೇಳಿದರು.

ಅವರು ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು ನ್ಯಾಯವಾದಿಗಳ ಸಂಘ ಮತ್ತು ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದ ಎಚ್‌ಐವಿ-ಏಡ್ಸ್ ದಿನಾಚರಣೆಯ ಅಂಗವಾಗಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಎಚ್‌ಐವಿಯ ಗಂಭೀರತೆಯನ್ನು ಅರಿತು 1987-88ರಿಂದ ಡಬ್ಲ್ಯೂಎಚ್‌ಒ ಎಲ್ಲರ ಸಹಕಾರದೊಂದಿಗೆ ಡಿ. 1ರಂದು ವಿಶ್ವ ಏಡ್ಸ್ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಣೆ ಮಾಡುತ್ತಿದೆ. ಭಾರತದಲ್ಲಿ ಆರಂಭದಲ್ಲಿ ಇದ್ದ ಎಚ್‌ಐವಿ ಪೀಡಿತರ ಸೋಂಕು ಗಣನೀಯವಾಗಿ ಇಳಿಕೆಯಾಗಿದೆ, ಸಂಪೂರ್ಣ ನಿವಾರಣೆಯಾಗುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಿದೆ ಎಂದು ಹೇಳಿದರು.

ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ವೀಣಾ ಪಿ.ಎಸ್ ಮಾತನಾಡಿ ಎಚ್‌ಐವಿ ಪೀಡಿತರನ್ನು ಯಾವುದೇ ಕಾರಣಕ್ಕೂ ಪ್ರತ್ಯೇಕಗೊಳಿಸಬಾರದು. ಅವರನ್ನು ನಮ್ಮಲ್ಲಿ ಒಬ್ಬರು ಎಂಬ ಭಾವನೆಯಲ್ಲಿ ನೋಡಿದಾಗ ಅವರಿಗೆ ಸಮಾಜದಲ್ಲಿ ಆತಂಕ ಇಲ್ಲದೆ ಬದುಕು ಸಾಗಿಸಲು ಸಾಧ್ಯವಿದೆ. ಕೆಮ್ಮುವುದರಿಂದ, ಸೀನುವುದರಿಂದ, ಮುಟ್ಟುವುದರಿಂದ ಎಚ್‌ಐವಿ ಬರುತ್ತದೆ ಎಂಬ ಅಭಿಪ್ರಾಯ ತಪ್ಪು. ಇಂತಹ ತಪ್ಪು ಕಲ್ಪನೆ ಬಿಟ್ಟು ಸಹಬಾಳ್ವೆಯ ಬದುಕು ಸಾಗಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಮಾತನಾಡಿ, ಏಡ್ಸ್ ಎನ್ನುವ ಮಾರಣಾಂತಿಕ ಸೋಕಿಗೆ ವಿಜ್ಞಾನದಲ್ಲಿ ಇನ್ನು ಸೂಕ್ತ ಔಷಧಿ ಪತ್ತೆಯಾಗಿಲ್ಲ. ಜನತೆ ಶಿಸ್ತು, ಸಂಯಮ, ವಿಶ್ವಾಸದ ಜೀವನ ನಡೆಸಿದರೆ ಸೋಂಕು ತಗುಲದಂತೆ ನೋಡಿಕೊಳ್ಳಬಹುದು. ಆದರೆ ಏಡ್ಸ್ ಪೀಡಿತರನ್ನು ಅಘೋಷಿತವಾಗಿ ಬಹಿಷ್ಕರಿಸುವ ಮೂಲಕ ಏಡ್ಸ್ ಸೋರಿಕೆಗಿಂತಲೂ ಅಮಾನವೀಯವಾಗಿರುತ್ತದೆ. ಆದುದರಿಂದ ಏಡ್ಸ್ ಪೀಡಿತರನ್ನು ಮಾನವೀಯ ನೆಲೆಯಲ್ಲಿ ಗೌರವಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಪುತ್ತೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಐಸಿಟಿಸಿ ಸಲಹೆಗಾರ ತಾರನಾಥ ಮಾಹಿತಿ ನೀಡಿದರು.

ಪುತ್ತೂರು ವಕೀಲರ ಸಂಘದ ಕೋಶಾಧಿಕಾರಿ ಕುಮಾರನಾಥ್ ಎಸ್, ವಕೀಲರ ಸಂಘದ ಜೊತೆ ಕಾರ್ಯದರ್ಶಿ ದೀಪಕ್ ಬೊಳ್ವಾರ್, ಸರಕಾರಿ ಆಸ್ಪತ್ರೆಯ ಎಲಬು ಮತ್ತು ಕೀಲು ತಜ್ಞ ಡಾ. ಅಜಯ್ ಉಪಸ್ಥಿತರಿದ್ದರು.

ಸರಕಾರಿ ಆಸ್ಪತ್ರೆಯ ಎಕ್ಸ್‌ರೇ ಟೆಕ್ನಿಷಿಯನ್ ಮಂಗಣ್ಣ ಗೌಡ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News