ಕೋಡಿ: ಬ್ಯಾರೀಸ್ ಶಿಕ್ಷಣ ಸಂಸ್ಥೆಯ 111ನೆ ವಾರ್ಷಿಕೋತ್ಸವ

Update: 2017-12-16 14:36 GMT

ಕುಂದಾಪುರ, ಡಿ.16: ಕೋಡಿ ಬೀಚ್ ರಸ್ತೆಯ ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಶನಿವಾರ ಆಯೋಜಿಸಲಾದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ 111ನೆ ವಾರ್ಷಿಕ ಸಮಾರಂಭದಲ್ಲಿ 111ನೆ ವರ್ಷದ ಲಾಂಛನವನ್ನು ರಾಜ್ಯ ನಗರಾಭಿ ವೃದ್ಧಿ ಮತ್ತು ಹಜ್ ಸಚಿವ ರೋಶನ್ ಬೇಗ್ ಅನಾವರಣಗೊಳಿಸಿದರು.

 ಬಳಿಕ ಮಾತನಾಡಿದ ಅವರು ಜನರಿಂದ ಲಕ್ಷಾಂತರ ರೂ. ಹಣ ವಸೂಲಿ ಮಾಡುವ ಮೂಲಕ ಶಿಕ್ಷಣವನ್ನು ವ್ಯಾಪರೀಕರಣ ಮಾಡಲಾಗಿದೆ. ಆದರೆ ಬ್ಯಾರೀಸ್ ಶಿಕ್ಷಣ ಸಂಸ್ಥೆಯು ಯಾವುದೇ ಡೊನೆಶನ್ ಇಲ್ಲದೆ ಬಡವರಿಗೆ ಶಿಕ್ಷಣ ನೀಡಬೇಕೆಂಬ ಸಾಮಾಜಿಕ ಬದ್ಧತೆ ಯೊಂದಿಗೆ ಈ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಅವರು ತಿಳಿಸಿದರು.

ಪೋಷಕರು ಮಕ್ಕಳಿಗೆ ವಿನಾಕಾರಣ ಹೊಡೆಯಬಾರದು. ಅವರಿಗೆ ಪ್ರೀತಿ ತೋರಿಸಿ ಅವರ ಜೊತೆ ಬೆರೆಯುವ ಕೆಲಸ ಮಾಡಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ, ಕೆಲಸಕ್ಕೆ ಕಳುಹಿಸಿ ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಿದರೆ ಅವರು ತಮ್ಮ ಭವಿಷ್ಯ ವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬ್ಯಾರೀಸ್ ಸಂಸ್ಥೆಯು ಅದ್ಭುತ ಸಾಧನೆಯನ್ನು ಮಾಡಿದೆ. ಇದಕ್ಕೆ ದೇವರ ಅನುಗ್ರಹವೇ ಕಾರಣ. ಹಣ ಇಲ್ಲ ಎಂಬ ಕಾರಣಕ್ಕೆ ಬಡವರು ಶಿಕ್ಷಣದಿಂದ ವಂಚಿತರಾಗಬಾರದು. ಬ್ಯಾರೀಸ್ ಸಂಸ್ಥೆಯಲ್ಲಿ ದುಡ್ಡಿನ ಮುಖಕ್ಕಿಂತ ಮಾನವೀಯ ಮುಖಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ ಎಂದು ಹೇಳಿದರು.

ಮುಸ್ಲಿಮರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆ ನೀಡಬೇಕು. ಅವರನ್ನು ಶಿಕ್ಷಣ ದಿಂದ ವಂಚಿತರನ್ನಾಗಿಸುವ ಕೆಲಸ ಮಾಡಬಾರದು ಎಂದ ಅವರು, ಉಡುಪಿ ನಗರಸಭೆ ಮತ್ತು ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗೆ ಜನವರಿ ತಿಂಗಳೊಳಗೆ ಚಾಲನೆ ನೀಡುವ ಕಾರ್ಯ ಮಾಡಲಾಗುವುದು ಎಂದರು.

ಶಾಲೆಯ ಕ್ರೀಡಾಂಗಣಗಳನ್ನು ಇಲಾಖೆಯ ಹೆಸರಿಗೆ ಮಾಡಿದರೆ ಅನುದಾನ ಒದಗಿಸಲಾಗುವುದು ಎಂಬ ಫರ್ಮಾನು ಹೊರಡಿಸಿದ ಪರಿಣಾಮ ರಾಜ್ಯದಲ್ಲಿ ಈವರೆಗೆ ಇದ್ದ ಇಲಾಖೆಯ ಆಸ್ತಿಯು 2000 ಎಕರೆಯಿಂದ 2500 ಎಕರೆಗೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ರಿಜಿಸ್ಟ್ರಾರ್ ಡಾ.ಎ.ಎಂ.ಖಾನ್, ಮುಂಬೈ ಸ್ಟಾರ್ ಟಿವಿಯ ಉಪಾಧ್ಯಕ್ಷ ಹಾಗೂ ಆಡಳಿತಾ ಧಿಕಾರಿ ಗಣೇಶ್ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮಹಮೂದ್ ವಹಿಸಿದ್ದರು.

ಪುರಸಭೆ ಸದಸ್ಯರಾದ ಪ್ರಭಾಕರ್ ಶೇರಿಗಾರ್, ಜ್ಯೋತಿ ಉಪಸ್ಥಿತರಿದ್ದರು.

ಪ್ರೌಢಶಾಲೆಯ ಜಯಶೀಲ ಶೆಟ್ಟಿ ಹಾಗೂ ಡಿಎಡ್ ಕಾಲೇಜಿನ ಫಿದೌಸ್ ವರದಿ ವಾಚನ ಮಾಡಿದರು. ವಿದ್ಯಾರ್ಥಿ ಪೋಷಕ ಶಿವಾನಂದ ಜುಮ್ಮಣ್ಣನವರ್ ಅನಿಸಿಕೆ ವ್ಯಕ್ತಪಡಿಸಿದರು. ಕ್ರೀಡಾ ಸಾಧಕ ವಿದ್ಯಾರ್ಥಿ ಮುಹಮ್ಮದ್ ಅಝೀಝ್ ಗುಲ್ವಾಡಿ ಅವರನ್ನು ಸನ್ಮಾನಿಸಲಾಯಿತು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸೈಯದ್ ಮುಹಮ್ಮದ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕ ಸಂದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.

ಉಪನ್ಯಾಸಕಿ ಸುಪ್ರೀತಾ ಶೆಟ್ಟಿ ವಂದಿಸಿದರು. ಶ್ರೀಲಕ್ಷ್ಮೀ ಹಾಗೂ ಪರಾಝ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News