ಕೇಂದ್ರ ಸರಕಾರದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದು ಹತ್ಯೆ: ಕುಟುಂಬದ ಆರೋಪ

Update: 2017-12-16 14:55 GMT

ಹೊಸದಿಲ್ಲಿ, ಡಿ.16: ನಾಪತ್ತೆಯಾದ ಮೂರು ದಿನಗಳ ನಂತರ ದಿಲ್ಲಿ ಸಮೀಪ ರೈಲ್ವೇ ಹಳಿಯಲ್ಲಿ ಮೃತರಾಗಿ ಪತ್ತೆಯಾದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಅವರನ್ನು ಹತ್ಯೆಗೈದು ಅಲ್ಲಿ ತಂದು ಹಾಕಲಾಗಿದೆ ಎಂದು ಮೃತ ಅಧಿಕಾರಿಯ ಕುಟುಂಬಸ್ಥರು ಶುಕ್ರವಾರ ಆರೋಪಿಸಿದ್ದಾರೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಭಾರತೀಯ ನಾಗರಿಕ ಅಕೌಂಟ್ ಸೇವಾ ಅಧಿಕಾರಿಯಾಗಿದ್ದ ಜಿತೇಂದ್ರ ಕುಮಾರ್ ಝಾ ಅವರ ಮೃತದೇಹ ಸೋಮವಾರ ಪಾಲಮ್ ಸಮೀಪ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು. ಮೃತರ ಜೇಬಿನಲ್ಲಿ ಸಿಕ್ಕಿದ್ದ ಪತ್ರದ ಆಧಾರದಲ್ಲಿ ಪೊಲೀಸರು ಇದನ್ನು ಆತ್ಮಹತ್ಯೆ ಪ್ರಕರಣ ಎಂದು ತಿಳಿಸಿದ್ದರು. ಮೊದಲಿಗೆ ಝಾ ಕುಟುಂಬ ಅವರ ಮೃತದೇಹದ ಗುರುತು ಹಿಡಿಯಲು ಅಸಮರ್ಥವಾದರೂ ನಂತರ ಪೊಲೀಸರು ಅವರ ಪರ್ಸ್ ಮತ್ತು ಬಟ್ಟೆಗಳನ್ನು ತೋರಿಸಿದಾಗ ಅದು ಝಾ ಅವರಿಗೆ ಸೇರಿದ್ದು ಎಂದು ಒಪ್ಪಿಕೊಂಡಿದ್ದರು.

ಮೃತದೇಹವನ್ನು ಸಂಪೂರ್ಣವಾಗಿ ರೂಪಗೆಡಿಸಿದ್ದ ಕಾರಣ ಮೊದಲಿಗೆ ನಮಗೆ ಗುರುತು ಸಿಗಲಿಲ್ಲ ಎಂದು ತಿಳಿಸಿರುವ ಝಾ ಅವರ ಸೋದರ ಸಂಬಂಧಿಯಾದ ಆರ್‌ಎನ್ ಮಿಶ್ರಾ ನಾನಿನ್ನು ಬಹಳ ಕಾಲ ಬದುಕುವುದಿಲ್ಲ ಎಂದು ಝಾ ಮೂರು-ನಾಲ್ಕು ತಿಂಗಳ ಹಿಂದೆ ನನ್ನಲ್ಲಿ ಹೇಳಿದ್ದರು. ಅವರಿಗೆ ಜೀವಭಯವಿತ್ತು. ಹಾಗಾಗಿ ಅವರ ಸಾವಿನಲ್ಲಿ ಯಾರದ್ದೋ ಕೈವಾಡವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಝಾ ಎಷ್ಟು ಭಯಭೀತರಾಗಿದ್ದರೆಂದರೆ ಅವರು ಕೆಲಸಕ್ಕೂ ಹೋಗದೆ ರಜೆ ಹಾಕಿ ಮನೆಯಲ್ಲೇ ಉಳಿದಿದ್ದರು ಎಂದು ಮಿಶ್ರಾ ತಿಳಿಸಿದ್ದಾರೆ.

ಝಾ ನಮ್ಮ ಮನೆಗೂ ಬರುತ್ತಿರಲಿಲ್ಲ. ನಮಗೇನಾದರೂ ಅವರನ್ನು ಭೇಟಿ ಮಾಡಬೇಕಾದರೆ ನಾವೇ ಅವರ ಮನೆಗೆ ಹೋಗಬೇಕಿತ್ತು. ಕೆಲವು ತಿಂಗಳಿಂದ ಅವರು ತಮ್ಮ ಮೊಬೈಲ್ ಫೋನನ್ನು ಕೂಡಾ ಮನೆಯಲ್ಲೇ ಬಿಟ್ಟು ತೆರಳುತ್ತಿದ್ದರು. ತನ್ನ ಲೊಕೇಶನನ್ನು ಇತರರು ತಿಳಿಯಬಹುದು ಎಂಬ ಭಯ ಅವರಿಗಿತ್ತು. ಅವರು ನಾಪತ್ತೆಯಾದ ದಿನದಂದು ಕೂಡಾ ಅವರ ಮೊಬೈಲ್ ಫೋನ್ ಮನೆಯಲ್ಲೇ ಇತ್ತು ಎಂದು ಮಿಶ್ರಾ ತಿಳಿಸಿದ್ದಾರೆ.

1998ರ ತಂಡದ ಅಧಿಕಾರಿಯಾಗಿದ್ದ ಝಾ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ತರಬೇತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಸೆಪ್ಟಂಬರ್ 28ರಿಂದ ಅವರು ವೈದ್ಯಕೀಯ ರಜೆಯನ್ನು ತೆಗೆದುಕೊಂಡಿದ್ದು ಕೆಲಸಕ್ಕೆ ತೆರಳುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News