ವಿದ್ಯಾರ್ಥಿನಿಗೆ ಕಿರುಕುಳ: ಮೂವರ ವಿರುದ್ಧ ದೂರು
ಬೆಳ್ತಂಗಡಿ, ಡಿ. 16: ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾಥಿನಿಗೆ ಮೂರು ಮಂದಿ ಯುವಕರು ಕಿರುಕುಳ ನೀಡಿ ,ಮಾನ ಹಾನಿಗೆ ಯತ್ನಿಸಿದ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕಕ್ಕಿಂಜೆ ಎಂಬಲ್ಲಿ ಶನಿವಾರ ನಡೆದಿದ್ದು, ಯುವಕರ ಮೇಲೆ ಫೋಕ್ಸೋ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಕ್ಕಿಂಜೆಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟವೂ ನಡಡೆದಿದ್ದು, ಕಕ್ಕಿಂಜೆಯಲ್ಲಿ ಬಿಗು ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.
ಕಕ್ಕಿಂಜೆಯ ಗಾಂಧಿನಗರದ ನಿವಾಸಿಗಳಾದ ತಮೀಮ್, ತನ್ವೀರ್, ಇರ್ಫಾನ್ ಆರೋಪಿಗಳು ಎಂದು ಗುರುತಿಸಲಾಗಿದ್ದು, ಶನಿವಾರ ಬೆಳಗ್ಗೆ ಬಾಲಕಿ ತನ್ನ ಸ್ನೇಹಿತೆಯೊಂದಿಗೆ ಬಸ್ ನಿಂದ ಇಳಿದು ಶಾಲೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳು ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ಮಧ್ಯಾಹ್ನ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದಾಗ ಆರೋಪಿಗಳು ಬೈಕಿನಲ್ಲಿ ಬಂದು ಅಡ್ಡಗಟ್ಟಿ ಬಾಲಕಿಗೆ ಕಿರುಕುಳ ನೀಡಿದ್ದು, ಇವರಿಂದ ತಪ್ಪಿಸಿಕೊಂಡು ಪೇಟೆಗೆ ಬಾಲಕಿ ಬಂದಾಗ ಅಲ್ಲಿಯೂ ಕೈ ಹಿಡಿದು ಎಳೆದು ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾಳೆ. ಆಕೆಯ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಫೊಕ್ಸೋ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.
ಬಾಲಕಿಗೆ ಕಿರುಕುಳ ನೀಡಿದ್ದಾರೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ತಂಡವೊಂದು ಘಟನೆಯ ಬಗ್ಗೆ ವಿಚಾರಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದ್ದು ಈ ಸಂದರ್ಭ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಮಾಹಿತಿ ಪಡೆದ ಧರ್ಮಸ್ಥಳ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಅಲ್ಲಿ ಸೇರಿದ್ದ ಎರಡೂ ಗುಂಪಿನ ಜನರನ್ನು ಚದುರಿಸಿದ್ದಾರೆ. ಯಾವುದೇ ಅಹಿತಕ ಘಟನೆ ನಡೆಯದಂತೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಬಿಗು ಬಂದೋಬಸ್ತ್ ಮಾಡಲಾಗಿದ್ದು, ಕಕ್ಕಿಂಜೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.