ಡಿ.18: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ; 19ರಂದು ಲಕ್ಷದ್ವೀಪಕ್ಕೆ ಪಯಣ
ಮಂಗಳೂರು, ಡಿ.17: ಪ್ರಧಾನಿ ನರೇಂದ್ರ ಮೋದಿ ಡಿ.18ರಂದು ರಾತ್ರಿ 11 ಗಂಟೆಗೆ ಮಂಗಳೂರಿಗೆ ಆಗಮಿಸಲಿದ್ದಾರೆ. ಹೊಸದಿಲ್ಲಿಯಿಂದ ವಾಯುಪಡೆಯ ವಿಶೇಷ ವಿಮಾನದಲ್ಲಿ ಆಗಮಿಸುವ ಅವರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಲಿದ್ದಾರೆ ಎಂದು ತಿಳಿದು ಬಂದಿದೆ.
ಡಿ.19ರಂದು ಬೆಳಗ್ಗೆ ಸುಮಾರು 7:30ಕ್ಕೆ ವಿಶೇಷ ವಿಮಾನದಲ್ಲಿ ಮೂಲಕ ಕೊಚ್ಚಿಗೆ ತೆರಳಲಿದ್ದಾರೆ. ಓಖಿ ಚಂಡಮಾರುತದಿಂದ ಹಾನಿಯುಂಟಾದ ಪ್ರದೇಶಗಳಿಗೆ ತೆರಳಲಿರುವ ಮೋದಿ ಸಂತ್ರಸ್ತರಿಗೆ ಸಾಂತ್ವನ ಹೇಳಲಿದ್ದಾರೆ. ಬಳಿಕ ಅವರು ಲಕ್ಷದ್ವೀಪ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.
ಅಂದು ಅಪರಾಹ್ನ 2:50ಕ್ಕೆ ಕನ್ಯಾಕುಮಾರಿಯಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಸಂಜೆ 5:45ಕ್ಕೆ ತಿರುವನಂತಪುರದಲ್ಲೂ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಒಖಿ ಚಂಡಮಾರುತದಿಂದ ಲಕ್ಷದ್ವೀಪದಲ್ಲಿ ಅಪಾರ ಹಾನಿ ಸಂಭವಿಸಿತ್ತು. ಹಾಗಾಗಿ ಹಾನಿಗೀಡಾದ ಪ್ರದೇಶಗಳ ವೀಕ್ಷಣೆ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ತದನಂತರ ತಿರುವನಂತಪುರಕ್ಕೆ ಭೇಟಿ ನೀಡುವರು. ಅಲ್ಲಿಂದ ನೇರವಾಗಿ ಹೊಸದಿಲ್ಲಿಗೆ ನಿರ್ಗಮಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಅತ್ಯಂತ ಗೌಪ್ಯ: ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಮೂಲಕ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸುವ ಕಾರ್ಯಕ್ರಮದ ಗೌಪ್ಯತೆ ಕಾಪಾಡಲಾಗಿದೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಯಾವುದೇ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಆದರೆ, ಬಿಜೆಪಿ ಕಚೇರಿ ಮೂಲಗಳು ಪ್ರಧಾನಿಯ ಭೇಟಿಯನ್ನು ಖಚಿತಪಡಿಸಿವೆ. ಈ ಮಧ್ಯೆ ಪ್ರಧಾನಿ ಮಂಗಳೂರಿನಲ್ಲಿ ಅಧಿಕೃತ ಕಾರ್ಯಕ್ರಮವನ್ನಿಟ್ಟುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ತೀವ್ರ ತಪಾಸಣೆ: ಪ್ರಧಾನಿ ನರೇಂದ್ರ ಮೋದಿಯ ಮಂಗಳೂರು ಭೇಟಿಯನ್ನು ಗೌಪ್ಯವಾಗಿಟ್ಟರೂ ಕೂಡ ನಗರದ ಎಲ್ಲೆಡೆ ಬಿಗು ತಪಾಸಣೆ ನಡೆಸಲಾಗುತ್ತಿದೆ. ಪೊಲೀಸರು ನಗರದ ಲಾಡ್ಜ್‌ಗಳ ಹಾಗೂ ವಾಹನಗಳ ತಪಾಸಣೆಯನ್ನು ಬಿರುಸುಗೊಳಿಸಿದ್ದಾರೆ.