ರಾಜ್ಯ ಸರ್ಕಾರಿ ಗ್ರೂಪ್ ಡಿ ನೌಕರರ ರಾಜ್ಯ ಸಮ್ಮೇಳನ
ಮಂಗಳೂರು, ಡಿ.17: ದ.ಕ. ಜಿಲ್ಲಾ ಡಿ’ವರ್ಗ ನೌಕರರ ಸಂಘದ ವಜ್ರಮಹೋತ್ಸವದ ಸಮಾರೋಪ ಹಾಗೂ ರಾಜ್ಯ ಸರಕಾರಿ ಗ್ರೂಪ್ ಡಿ ನೌಕರರ ರಾಜ್ಯ ಸಮ್ಮೇಳನವು ರವಿವಾರ ನಗರದ ಪುರಭವನದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಪ್ರತಿ ಇಲಾಖೆಯಲ್ಲಿ ಡಿ’ಗ್ರೂಪ್ ನೌಕರರ ಸೇವೆ ಮುಖ್ಯವಾದುದು. ಇಲಾಖೆಯ ಕೆಲಸಗಳು ವೇಗವಾಗಿ ಮತ್ತು ವ್ಯವಸ್ಥಿತವಾಗಿ ಸಾಗುವಲ್ಲಿ ಇವರ ಪಾತ್ರ ಅಪಾರ ಎಂದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವ ಇರಬೇಕಾಗಿದೆ. ಸೇವೆ ಮತ್ತು ತ್ಯಾಗ ಮನೋಭಾವ ಇದ್ದಾಗ ಸಮಾಜದ ಪ್ರಗತಿ ಹೊಂದಲು ಸಾಧ್ಯ ಎಂದರು.
ಈ ಸಂದರ್ಭ ಸಂಘಟನೆಯ ‘ವಜ್ರಜವಾನ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಅಪರ ಜಿಲ್ಲಾಧಿಕಾರಿ ಕುಮಾರ್, ದ.ಕ.ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಜೆಪ್ಪು ಅಂತ ಅಂತೋನಿ ಆಶ್ರಮದ ನಿರ್ದೇಶಕ ರೆ.ಾ.ಒನಿಲ್ ಡಿಸೋಜ, ಡಿ’ಗ್ರೂಪ್ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎಂ. ನಟರಾಜು, ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಸಾಧಕರಿಗೆ ಗೌರವ
ಕಾರ್ಯಕ್ರಮದಲ್ಲಿ 2013ರ ಆ.13ರಂದು ಉಳಾಯಿಬೆಟ್ಟುವಿನಲ್ಲಿ ಸಂಭವಿಸಿದ್ದ ಬಸ್ ದುರಂತದಲ್ಲಿ ಜೀವರಕ್ಷಕನಾಗಿ ಕೆಲಸ ಮಾಡಿದ್ದ ಪಿ.ಕೆ. ಸುಧಾಕರ್‌ರಿಗೆ ವಜ್ರಜವಾನ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ಸೈನಿಕರಾದ ರಾಮಶೇಷ ಶೆಟ್ಟಿ, ಕೆ.ಕೃಷ್ಣ ಶೆಟ್ಟಿ. ಪ್ರದೀಪ್ ಕುಮಾರ್, ಅಶುತಾ ಕೆ. ಅವರನ್ನು ಗೌರವಿಸಲಾಯಿತು. ಅಲ್ಲದೆ ನಿವೃತ್ತ ಸಿಬ್ಬಂದಿಗಳಿಗೆ ಸನ್ಮಾನ, ಸಾಧಕರಿಗೆ ಗೌರವ, ವಿದ್ಯಾರ್ಥಿ ವೇತನ ವಿತರಣೆಯೂ ನಡೆಯಿತು.