×
Ad

ದೇಶದ ಶೇ.50ರಷ್ಟು ಗರ್ಭಿಣಿಯರಲ್ಲಿ ಅನೀಮಿಯಾ: ಶಾಲಿನಿ ಸಿಂಗ್

Update: 2017-12-17 21:07 IST

ಮಂಗಳೂರು, ಡಿ.17: ದೇಶದ ಗರ್ಭಿಣಿಯರ ಪೈಕಿ ಶೇ. 50ರಷ್ಟು ಮಂದಿ ರಕ್ತಹೀನತೆ, ಥೈರಾಯ್ಡ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹಾಗಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಗರ್ಭಿಣಿಯರಿಗೆ ಸೂಕ್ತ ಆರೋಗ್ಯ ತಪಾಸಣಾ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ಬೆಂಗಳೂರಿನ ವೈದ್ಯೆ ಡಾ. ಶಾಲಿನಿ ಸಿಂಗ್ ಹೇಳಿದರು.

ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ವತಿಯಿಂದ ನಗರದ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ದ ನಿರಂತರ ವೈದ್ಯಕೀಯ ಶಿಕ್ಷಣ ಮಾಲಿಕೆಯಲ್ಲಿ ಅವರು ಉಪನ್ಯಾಸ ನೀಡಿದರು.

ಗರ್ಭಿಣಿಯರಿಗೆ ಆರಂಭಿಕ ಹಂತದಲ್ಲೇ ಸ್ಕ್ರೀನಿಂಗ್ ಮತ್ತಿತರ ತಪಾಸಣಾ ಸೌಲಭ್ಯವನ್ನು ಕಲ್ಪಿಸುವುದರಿಂದ ಭ್ರೂಣದ ಹಂತದಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ಸರಿಪಡಿಸಬಹುದಾಗಿದೆ. ಭಾರತದ ಗರ್ಭಿಣಿಯರಲ್ಲಿ ಪ್ರಮುಖವಾಗಿ ಕಬ್ಬಿಣದ ಅಂಶ, ಪ್ರೊಟೀನ್ ಹಾಗೂ ವಿಟಮಿನ್ ಕೊರತೆಗಳು ಕಂಡುಬರುತ್ತಿವೆ. ಇದರ ಜತೆಗೆ ಹಿಮೋಗ್ಲೋಬಿನೋಪಥಿ ಕೂಡಾ ತೀವ್ರ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಡಾ. ಶಾಲಿನಿ ಸಿಂಗ್ ನುಡಿದರು.

ತಾಯಿ ಹಾಗೂ ಗರ್ಭದಲ್ಲಿರುವ ಮಗುವಿನ ಆರೋಗ್ಯದ ದೃಷ್ಟಿಯಿಂದ ವೈರಲ್‌ನಂತಹ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಆರೋಗ್ಯವಂತ ಮಗುವನ್ನು ಪಡೆಯುವ ಸಲುವಾಗಿ ಸೂಕ್ತ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಡಾ. ಶಾಲಿನಿ ಸಿಂಗ್ ಹೇಳಿದರು.

ಮಣಿಪಾಲ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಕೆ.ಎಂ.ಗಿರೀಶ್ ಮಾತನಾಡಿ, ಭ್ರೂಣದ ಡಿಎನ್‌ಎ ಮಾದರಿ ಪಡೆದು ರೋಗಲಕ್ಷಣ ತಿಳಿಯುವ ನೂತನ ವಿಧಾನದ ಮೂಲಕ ವಂಶವಾಹಿ ರೋಗಗಳ ಸಾಧ್ಯತೆಯನ್ನೂ ತಡೆಯಬಹುದಾಗಿದೆ. ಗರ್ಭಿಣಿಯರಿಗೆ 10ನೇ ವಾರದಲ್ಲಿ ಈ ಪರೀಕ್ಷೆ ನಡೆಸಬೇಕು. ಡೌನ್ ಸಿಂಡ್ರೋಮ್‌ನಂಥ ಸಮಸ್ಯೆಗಳನ್ನು ನಿವಾರಿಸುವಲ್ಲೂ ಇದು ಪ್ರಮುಖ ಹೆಜ್ಜೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಐಎಂಎ ಅಧ್ಯಕ್ಷ ಡಾ.ಕೆ.ಆರ್.ಕಾಮತ್ ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ಕುರಿತ ದೂರುಗಳನ್ನು ಪರಿಶೀಲಿಸಲು ಐಎಂಎ ವತಿಯಿಂದ ಹಿರಿಯ ವೈದ್ಯೆ ಡಾ.ಅಮೃತಾ ಭಂಡಾರಿ ಅಧ್ಯಕ್ಷತೆಯಲ್ಲಿ ತಜ್ಞ ವೈದ್ಯರ ಸಮಿತಿ ರಚಿಸಲಾಗಿದೆ ಎಂದರು

ವೇದಿಕೆಯಲ್ಲಿ ಕಾರ್ಯದರ್ಶಿ ಡಾ.ಉಲ್ಲಾಸ್ ಶೆಟ್ಟಿ, ವತ್ಸಲಾ ಕಾಮತ್, ಪ್ರೇಮಾ ಡಿಕುನ್ನಾ, ಕೋಶಾಧ್ಯಕ್ಷೆ ಡಾ.ಸುಚಿತ್ರಾ ಶಣೈ, ಡಾ.ಅಮೃತಾ ಭಂಡಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News