×
Ad

ವಿದೇಶಿ ವಿದ್ಯಾರ್ಥಿಗಳಿಗೆ ಬ್ಯಾರಿ ಭಾಷಾ ಪರಿಚಯ ಕಾರ್ಯಕ್ರಮ

Update: 2017-12-17 21:14 IST

ಮಂಗಳೂರು, ಡಿ.17: ದೇರಳಕಟ್ಟೆಯ ಬ್ಯಾರಿ ಸಾಹಿತಿ ಕಲಾವಿದರ ಒಕ್ಕೂಟವಾದ ‘ಮೇಲ್ತೆನೆ’ಯ ವತಿಯಿಂದ ವಿದೇಶಿ ವಿದ್ಯಾರ್ಥಿಗಳಿಗೆ ಬ್ಯಾರಿ ಭಾಷಾ ಪರಿಚಯ ಕಾರ್ಯಕ್ರಮವು ಶನಿವಾರ ದೇರಳಕಟ್ಟೆಯ ಆ್ಯಂಬಿಟ್ ಎಜುಕೇಶನಲ್ ಟ್ರಸ್ಟ್‌ನ ಸಭಾಂಗಣದಲ್ಲಿ ಜರಗಿತು.

ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಫ್ಘಾನಿಸ್ತಾನದ ಮುಹಮ್ಮದ್ ಈಸಾ ಅಲಿ ಝದಾಹ್, ಆಫ್ರಿಕಾದ ಲಿಯೋಸ್ತೊ ದೇಶದ ಕರಾಬೊ ರೂಬೆನ್ ಕ್ವೋಕೊಲೊ ಮತ್ತು ಮಹ್ಮೋಲೋ ಲೆಟ್ಸಿ ಎಂಬ ಮೂವರು ವಿದ್ಯಾರ್ಥಿಗಳಿಗೆ ಮೇಲ್ತೆನೆಯ ಉಪಾಧ್ಯಕ್ಷ ಇಸ್ಮತ್ ಪಜೀರ್ ಬ್ಯಾರಿ ಭಾಷೆಯನ್ನು ಪರಿಚಯಿಸಿಕೊಟ್ಟರು.

ಈ ವಿದ್ಯಾರ್ಥಿಗಳು ತಮ್ಮ ಬ್ಯಾರಿ ಸಹಪಾಠಿಗಳೊಂದಿಗೆ ಸ್ಥಳೀಯ ಭಾಷೆಗಳ ಬಗ್ಗೆ ಕುತೂಹಲ ವ್ಯಕ್ತಪಡಿಸಿ ಕಲಿಯುವ ಆಸಕ್ತಿ ತೋರಿದ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬ್ಯಾರಿ ಭಾಷೆ, ಜನಾಂಗ, ಬಳಸಲಾಗುವ ಲಿಪಿ ಮತ್ತು ಅದರ ಹಿನ್ನೆಲೆ, ಲಯ ಇತ್ಯಾದಿಗಳ ಕುರಿತಂತೆ ಪರಿಚಯಾತ್ಮಕ ತರಗತಿಯನ್ನು ಇಸ್ಮತ್ ಪಜೀರ್ ನಡೆಸಿಕೊಟ್ಟರು. ತೀವ್ರ ಕುತೂಹಲದಿಂದ ಬ್ಯಾರಿ ಭಾಷೆಯ ಬಗ್ಗೆ ಮಾಹಿತಿ ಪಡೆದುಕೊಂಡ ಈ ವಿದ್ಯಾರ್ಥಿಗಳಿಗೆ ದಿನನಿತ್ಯದ ವ್ಯವಹಾರಗಳಲ್ಲಿ ಬಳಸುವ ಕೆಲವು ಬ್ಯಾರಿ ವಾಕ್ಯಗಳನ್ನು ಇಂಗ್ಲಿಷ್ ಅರ್ಥಸಹಿತ ಪತ್ರವೊಂದನ್ನು ನೀಡಲಾಯಿತು.

ಆ ಬಳಿಕ ಅವರಿಂದ ಅದನ್ನು ಓದಿಸಲಾಯಿತು. ಮತ್ತೆ ಅವುಗಳಿಂದಲೇ ಏಕ ಪದ ಉತ್ತರಗಳುಳ್ಳ ಪ್ರಶ್ನೆ ಕೇಳಲಾಯಿತು. ಈ ಎಲ್ಲ ತರಗತಿ ಸ್ವರೂಪದ ಪ್ರಕ್ರಿಯೆಗಳಿಗೆ ಉತ್ತಮವಾಗಿ ಸ್ಪಂದಿಸಿದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಬ್ಯಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರೆ ಬ್ಯಾರಿ ಭಾಷೆಯ ಜೊತೆಗೆ ಸಂಸ್ಕೃತಿಯ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾದೀತು ಎಂದು ಅಭಿಪ್ರಾಯಪಟ್ಟರು.

ಮೇಲ್ತೆನೆ ಅಧ್ಯಕ್ಷ ಆಲಿಕುಂಞ ಪಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಯಾರಿ ಭಾಷೆ ಮತ್ತು ಸಂಸ್ಕೃತಿಗಳ ಬಗೆಗಿನ ವಿದ್ಯಾರ್ಥಿಗಳ ಕುತೂಹಲವನ್ನು ಕಾರ್ಯಕ್ರಮದ ಮಹತ್ವ ಹೆಚ್ಚಿಸಿತು. ಸಂಶೋಧಕರಾದ ಡಾ. ಸುಶೀಲಾ ಉಪಾಧ್ಯಾಯ ಹಾಗೂ ಪ್ರೊ. ಬಿ.ಎಂ. ಇಚ್ಲಂಗೋಡು ಅವರ ಕೃತಿಗಳನ್ನು ಹಾಗೂ ಪ್ರಮಾಣ ಪತ್ರವನ್ನು ಸಂದರ್ಭ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಬ್ಯಾರಿ ಭಾಷಾ ಚಳುವಳಿಯಲ್ಲಿ ಇಂತಹ ಕಾರ್ಯಕ್ರಮ ಒಂದು ವಿಶಿಷ್ಟ ಮೈಲಿಗಲ್ಲು. ಒಂದು ವಿಶ್ವವಿದ್ಯಾಲಯ, ಅಕಾಡಮಿ ಮಾತ್ರ ಮಾಡಬಹುದಾದ ಕಾರ್ಯಕ್ರಮವನ್ನು ಪುಟ್ಟ ಸಾಹಿತ್ಯಿಕ ಸಂಸ್ಥೆಯಾಗಿರುವ ಮೇಲ್ತೆನೆ ಮಾಡಿರುವ ಬಗ್ಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬ್ಯಾರಿ ಕವಿಗಳು, ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್, ಉದ್ಯಮಿ ಬಿ.ಕೆ. ನಿಸಾರ್ ಅಹ್ಮದ್, ಬೆಳ್ಮ ಗ್ರಾಪಂ ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಆ್ಯಂಬಿಟ್ ಎಜುಕೇಶನಲ್ ಟ್ರಸ್ಟ್‌ನ ನಿರ್ದೇಶಕ ಅಮೀರ್ ಶಾಫಿ ಹಾಗೂ ಮೇಲ್ತೆನೆಯ ಪದಾಧಿಕಾರಿಗಳಾದ ಬಶೀರ್ ಅಹ್ಮದ್ ಕಿನ್ಯ, ನಿಯಾಝ್.ಪಿ., ಹಂಝ ಮಲಾರ್, ಬಶೀರ್ ಕಲ್ಕಟ್ಟ, ಆರಿಫ್ ಕಲ್ಕಟ್ಟ, ರಫೀಕ್ ಪಾನೆಲ, ಬಾಷಾ ನಾಟೆಕಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News