ತನ್ನನ್ನು ಅಕ್ರಮವಾಗಿ ಮತಾಂತರಿಸಲಾಗಿದೆ ಎಂದು ಆರೋಪಿಸಿದ್ದವ ಬಜರಂಗದಳ ಕಾರ್ಯಕರ್ತ!

Update: 2017-12-17 16:14 GMT

ಭೋಪಾಲ,ಡಿ.17: ಕ್ರೈಸ್ತರ ಗುಂಪೊಂದು ತನ್ನನ್ನು ಅಕ್ರಮವಾಗಿ ಮತಾಂತರಗೊಳಿಸಿದೆ ಎಂದು ಆರೋಪಿಸಿದ್ದ ಧರ್ಮೇಂದ್ರ ದೋಹರ್, ತಾನು ಒಂದು ವರ್ಷ ಬಜರಂಗ ದಳದ ಸದಸ್ಯನಾಗಿದ್ದೆ ಎಂದು ರವಿವಾರ ಸುದ್ದಿಗಾರರಿಗೆ ತಿಳಿಸಿದ್ದಾನೆ. ಮತಾಂತರಗೊಳ್ಳಲು ತನಗೆ 5,000 ರೂ.ಗಳನ್ನು ನೀಡಲಾಗಿತ್ತು ಎಂದು ಪೊಲೀಸ್ ದೂರಿನಲ್ಲಿ ತಿಳಿಸಿರುವ ಆತ ಆ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ.

“ನೀನು ನಿಜಕ್ಕೂ ಮತಾಂತರಗೊಂಡಿದ್ದೀಯಾ” ಎಂಬ ಸುದ್ದಿಗಾರರ ಪ್ರಶ್ನೆಗೆ ಆತ, ತಾನು ಈ ಬಗ್ಗೆ ಮಾತನಾಡುವಂತಿಲ್ಲ. ಹಾಗೆ ಮಾಡಿದರೆ ವಿವಾದದಲ್ಲಿ ಸಿಲುಕಿಕೊಳ್ಳುತ್ತೇನೆ. ತಾನು ಹೇಳಿಕೆಯನ್ನು ಬದಲಿಸುತ್ತಿದ್ದೇನೆ ಎಂದು ಹೇಳಬಹುದು. ‘ಗುಂಪು’ ಇಂತಹ ಜನರು(ಕ್ರೈಸ್ತರು)ಇಲ್ಲಿಗೆ ಬರುವುದನ್ನು ಇಷ್ಟಪಡುವುದಿಲ್ಲ ಎಂದು ಉತ್ತರಿಸಿದ್ದಾನೆ.

ದೋಹರ್‌ನ ದೂರಿನ ಮೇರೆಗೆ ಸತ್ನಾ ಪೊಲೀಸರು 30 ಕೈಸ್ತರನ್ನು ಮತ್ತು ಇಬ್ಬರು ಧರ್ಮಗುರುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಜರಂಗ ದಳದ ಸದಸ್ಯರು ಪೊಲೀಸ್ ಠಾಣೆಯೊಳಗೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಧರ್ಮಗುರುಗಳು ಆರೋಪಿಸಿದ್ದು ,ಇದನ್ನು ಪೊಲೀಸರು ಅಲ್ಲಗಳೆದಿದ್ದಾರೆ.

“ನೀನು ಪೊಲೀಸರಿಗೆ ಅಥವಾ ಬಜರಂಗದಳಕ್ಕೆ ಹೆದರಿಕೊಂಡಿದ್ದೀಯಾ” ಎಂಬ ಪ್ರಶ್ನೆಗೆ ದೋಹಾರ್, “ನಾನು ನನ್ನ ಕುಟುಂಬದ ಬಗ್ಗೆ ಕಳವಳಗೊಂಡಿದ್ದೇನೆ. ನನ್ನಿಂದಾಗಿ ಅವರು ತೊಂದರೆಗೆ ಸಿಲುಕಿದ್ದಾರೆ. ಈ ಜನರು(ಕ್ರೈಸ್ತರು) ನಮ್ಮ ಮನೆಗೆ ಬರಲು ಮತ್ತು ನಮ್ಮೊಂದಿಗೆ ಬೆರೆಯಲು ಅವಕಾಶ ನೀಡಬಾರದು ಎಂದು ನಮಗೆ ಹೇಳಲಾಗಿತ್ತು” ಎಂದು ಉತ್ತರಿಸಿದ.

ಗುರುವಾರ ಸಂಜೆ ಭೂಮಕಾರ್ ಗ್ರಾಮದಲ್ಲಿ ಕ್ರಿಸ್‌ಮಸ್ ಪೂರ್ವ ಆಚರಣೆ ನಡೆಯುತ್ತಿದ್ದ ಹಾಲ್‌ಗೆ ನುಗ್ಗಿದ ಕೆಲವರು ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ದಾಂಧಲೆ ನಡೆಸಿದ್ದರು. ಸೈರೊ-ಮಲಬಾರ್ ಚರ್ಚ್ ಅಲ್ಲಿ ಮಕ್ಕಳಿಗಾಗಿ ಕಾರ್ಯಕ್ರಮ ವೊಂದನ್ನು ಏರ್ಪಡಿಸಿತ್ತು ಎಂದು ಸತ್ನಾ ಧರ್ಮಪ್ರಾಂತ್ಯದ ಸಾಮಾಜಿಕ ಕಾರ್ಯ ನಿರ್ದೇಶಕ ಫಾ.ಎಂ.ರಾನಿ ತಿಳಿಸಿದರು.

  ಠಾಣೆಯೊಳಗೆ ಕೈಸ್ತರ ಮೇಲೆ ಹಲ್ಲೆ ನಡೆದಿರುವುದನ್ನು ನಿರಾಕರಿಸಿದ ಪೊಲೀಸರು, ಕೈಸ್ತರ ಗುಂಪಿನ ಮೇಲೆ ಠಾಣೆಯ ಹೊರಗಡೆ ಹಲ್ಲೆ ನಡೆದಿತ್ತು. ಅವರಗೆ ಸೇರಿದ ಕಾರಿಗೆ ಬೆಂಕಿ ಹಚ್ಚಿದ್ದಕ್ಕೆ ಸಂಬಂಧಿಸಿದಂತೆ 18ರ ಹರೆಯದ ಯುವಕನನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ. ತಮ್ಮನ್ನು ಥಳಿಸಲಾಗಿದೆ ಎಂದು ಕ್ರೈಸ್ತರು ನಮಗೆ ದೂರು ಸಲ್ಲಿಸಿದರೆ ಖಂಡಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತೇವೆ ಎಂದು ಹೇಳಿದರು.

ಬಲವಂತದ ಮತಾಂತರದ ದೂರಿನ ಮೇರೆಗೆ ಫಾ.ಜಾರ್ಜ್ ಎ. ಮತ್ತು ಇತರ ಐವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News