ಟಿವಿ ಚರ್ಚೆಗಳು ‘ಭಾಷಾ ಉಗ್ರವಾದ’ ಸೃಷ್ಟಿಸುತ್ತಿವೆ: ಸೆನ್ಸಾರ್ ಮಂಡಳಿ ಅಧ್ಯಕ್ಷ ಜೋಶಿ

Update: 2017-12-17 16:23 GMT

ಪಣಜಿ(ಗೋವಾ),ಡಿ.17: ಟಿವಿಗಳಲ್ಲಿ ನಡೆಯುವ ಚರ್ಚೆಗಳನ್ನು ರವಿವಾರ ಇಲ್ಲಿ ಕಟುವಾಗಿ ಟೀಕಿಸಿದ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಶಿ ಅವರು, ಬೈಟ್ ಆಧಾರಿತ, ಒಂದು ಸಾಲಿನ ವಾದಗಳು ಭಾಷಾ ಉಗ್ರವಾದಕ್ಕೆ ಕಾರಣವಾಗುತ್ತಿವೆ ಎಂದು ಹೇಳಿದರು.

ಇಂಡಿಯಾ ಫೌಂಡೇಷನ್ ಏರ್ಪಡಿಸಿದ್ದ ಮೂರು ದಿನಗಳ ‘ಇಂಡಿಯಾ ಐಡಿಯಾಸ್ ಕಾಂಕ್ಲೇವ್ 2017’ರ ಅಂತಿಮ ದಿನದಂದು ಸಂವಾದ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಜೋಶಿ, ಈ ದೇಶದಲ್ಲಿ ನಾವು ನಿಜಕ್ಕೂ ಪ್ರಜಾಸತ್ತಾತ್ಮಕವಾಗಿರಬೇಕಾದರೆ ವಾದಗಳನ್ನು ಆಲಿಸುವ ಮತ್ತು ಅವುಗಳನ್ನು ಗೆಲ್ಲುವ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಬೇಕಾಗಿದೆ. ಅದು ಈ ಬೈಟ್ ಆಧಾರಿತ, ಒಂದು ಸಾಲಿನ ವಾದವಾಗಿರಲು ಸಾಧ್ಯವಿಲ್ಲ. ಇದು ಭಾಷಾ ಉಗ್ರವಾದವಾಗಿದೆ ಎಂದರು.

ಸುದ್ದಿ ವಾಹಿನಿಗಳಲ್ಲಿಯ ಸಮಕಾಲೀನ ಚರ್ಚೆಗಳನ್ನು ಪ್ರಸ್ತಾಪಿಸಿದ ಅವರು, ವಾದಗಳಲ್ಲಿ ತೊಡಗಿಕೊಂಡಿರುವ ಜನರನ್ನು ನಾವು ಅದೆಷ್ಟೋ ಸಲ ನೋಡುತ್ತಿರುತ್ತೇವೆ ಮತ್ತು ಅವರು ಅಸಹಾಯಕರು ಎಂಬ ಭಾವನೆ ನಮ್ಮಲ್ಲಿ ಮೂಡಿರುತ್ತದೆ. ಕಿರುತೆರೆಯಲ್ಲಿ ಚರ್ಚಿಸುವುದು ಇಂದು ಆಯ್ದ ಕೆಲವೇ ಜನರ ಹಕ್ಕು ಆಗಿಬಿಟ್ಟಿದೆ. ದೇಶದಲ್ಲಿಯ ಇಂತಹ ಕೆಲವರು ಅತ್ಯಂತ ಹೊಣೆಗೇಡಿಗಳಾಗಿದ್ದಾರೆ. ಟಿವಿಯಲ್ಲಿ ಮಾತನಾಡಲು ಸಾಧ್ಯವಾಗುವುದೇ ಇಂದು ಒಂದು ಹಕ್ಕಾಗಿದೆ. ಇಂತಹ ಚರ್ಚೆಗಳು ಅವರು ವಾದಗಳ ಸ್ವರೂಪ ಮತ್ತು ಶಬ್ದಭಂಡಾರವನ್ನು ತಿಳಿದಿದ್ದಾರೆ ಮತ್ತು ಅವರು ಗೆಲ್ಲುವ ಸ್ಥಾನದಲ್ಲಿದ್ದಾರೆ ಎಂದು ನಂಬಿಕೊಂಡಿವೆ ಎಂದರು.

ಹೀಗಾಗಿ ವಾದಿಸಲು ತರಬೇತಿ ಹೊಂದಿರದ ಜನರ ಧ್ವನಿಗಳು ಕೇಳುವುದೇ ಇಲ್ಲ. ಅವರು ತಮ್ಮ ವಾದವನ್ನು ರೂಪಿಸುವ ಮುನ್ನವೇ ಅವರನ್ನು ಕಡೆಗಣಿಸಲಾಗುತ್ತದೆ. ವಾದಗಳನ್ನು ಮಂಡಿಸುವಲ್ಲಿ ನುರಿತರು ಅನುಚಿತ ಲಾಭವನ್ನು ಪಡೆಯುತ್ತಿದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದು ಜೋಶಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News